ಶ್ರವಣಬೆಳಗೊಳ: ಅ. 3ರಿಂದ 46ನೇ ರಾಜ್ಯಮಟ್ಟದ ಸ್ಕೌಟ್ ಅಂಡ್ ಗೈಡ್ಸ್ ನ ಕಬ್ ಮತ್ತು ಬುಲ್‌ಬುಲ್ ಉತ್ಸವ; 800ಕ್ಕೂ ಹೆಚ್ಚು ಮಕ್ಕಳ ಭಾಗಿ

ಚನ್ನರಾಯಪಟ್ಟಣ (kannadapost.com): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ಹಾಸನ ಜಿಲ್ಲಾ ಸಂಸ್ಥೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಸಂಸ್ಥೆಯ ಸಹಯೋಗದಲ್ಲಿ ಶ್ರವಣಬೆಳಗೊಳದಲ್ಲಿ ಅಕ್ಟೋಬರ್ 3 ರಿಂದ 6ರವರೆಗೆ ’46ನೇ ರಾಜ್ಯಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವ’ವನ್ನು ಆಯೋಜಿಸಲಾಗಿದೆ ಎಂದು ಶಾಸಕ ಡಾ. ಸಿ.ಎನ್. ಬಾಲಕೃಷ್ಣ ತಿಳಿಸಿದ್ದಾರೆ.

​ಚನ್ನರಾಯಪಟ್ಟಣದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಉತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.

​800ಕ್ಕೂ ಹೆಚ್ಚು ಮಕ್ಕಳ ಭಾಗಿ:

“ನಾಲ್ಕು ದಿನಗಳ ಕಾಲ ನಡೆಯುವ ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಹೆಚ್ಚು ಮಕ್ಕಳು, ಸ್ಕೌಟ್–ಗೈಡ್ ಶಿಕ್ಷಕರು, ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ, ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸಹಕಾರ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ. ಆಗಮಿಸುವ ಎಲ್ಲಾ ಮಕ್ಕಳಿಗೆ ಅಗತ್ಯ ಸೌಲಭ್ಯ ಹಾಗೂ ಸೂಕ್ತ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು,” ಎಂದು ಶಾಸಕರು ಭರವಸೆ ನೀಡಿದರು.

​‘ಪುಟ್ಟ ಮನಸ್ಸು, ದೊಡ್ಡ ಕನಸು’:

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿ, “ಈ ಬಾರಿಯ ಉತ್ಸವವನ್ನು ‘ಪುಟ್ಟ ಮನಸ್ಸು, ದೊಡ್ಡ ಕನಸು’ ಎಂಬ ಆಶಯದಡಿ ರೂಪಿಸಲಾಗಿದೆ. ಉತ್ಸವದಲ್ಲಿ ಸಾಹಸ ಚಟುವಟಿಕೆ, ಹೊರಸಂಚಾರ, ಶೈಕ್ಷಣಿಕ ಸ್ಥಳಗಳ ವೀಕ್ಷಣೆ, ಆಟೋಟ, ಶಿಬಿರಾಗ್ನಿ, ಪ್ರಕೃತಿ ಅಧ್ಯಯನ, ಕರಕುಶಲ ಚಟುವಟಿಕೆಗಳು ನಡೆಯಲಿವೆ. ಇದೇ ವೇಳೆ ಶ್ರವಣಬೆಳಗೊಳದ ಐತಿಹಾಸಿಕ ಹಿನ್ನೆಲೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ನಾಡಿನ ಪರಂಪರೆಯ ಅರಿವು ಮೂಡಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆ ಕಲ್ಪಿಸಲಾಗಿದೆ,” ಎಂದು ತಿಳಿಸಿದರು.

​ಗಣ್ಯರ ಮಾರ್ಗದರ್ಶನ:

ಶ್ರವಣಬೆಳಗೊಳ ಮಠದ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ, ಶಾಸಕ ಡಾ. ಸಿ.ಎನ್. ಬಾಲಕೃಷ್ಣ ಅವರ ಸಹಕಾರ ಹಾಗೂ ರಾಜ್ಯ ಮುಖ್ಯ ಆಯುಕ್ತ, ಮಾಜಿ ಸಚಿವ ಡಾ. ಪಿ.ಜಿ.ಆರ್. ಸಿಂಧ್ಯ ಅವರ ಮಾರ್ಗದರ್ಶನದಲ್ಲಿ ಈ ಉತ್ಸವ ನಡೆಯಲಿದೆ. ಉತ್ಸವದ ಯಶಸ್ಸಿಗಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಭರದ ಸಿದ್ಧತೆ ಕೈಗೊಂಡಿದ್ದಾರೆ.

​ಸುದ್ದಿಗೋಷ್ಠಿಯಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರಾದ ಡಾ. ಭಾರತಿ ನಾಗೇಶ್, ಕಬ್ಬಾಳು ರಮೇಶ್, ದಿನೇಶ್, ಸಿ.ಎನ್. ಅಶೋಕ್, ಸಿಂಹಾದ್ರಿ ಮಂಜಣ್ಣ, ಸಿ.ಜಿ. ಮಂಜುನಾಥ್ ಸೇರಿದಂತೆ ಸ್ಕೌಟ್ ಮತ್ತು ಗೈಡ್ಸ್‌ನ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.