2.2 C
Munich
Home News ಬೇಲೂರು: ಜಮೀನು ವಿವಾದ, ಮರ ಕಡಿಯಲು ಅಡ್ಡಿಪಡಿಸಿದ್ದಕ್ಕೆ ವೃದ್ಧನ ಮೇಲೆ ಮಚ್ಚು, ಕೈಕೊಡಲಿಯಿಂದ ಮಾರಣಾಂತಿಕ ಹಲ್ಲೆ

ಬೇಲೂರು: ಜಮೀನು ವಿವಾದ, ಮರ ಕಡಿಯಲು ಅಡ್ಡಿಪಡಿಸಿದ್ದಕ್ಕೆ ವೃದ್ಧನ ಮೇಲೆ ಮಚ್ಚು, ಕೈಕೊಡಲಿಯಿಂದ ಮಾರಣಾಂತಿಕ ಹಲ್ಲೆ

ಬೇಲೂರು (ಹಾಸನ), ನ.21: ಜಮೀನು ವಿವಾದ ಹಾಗೂ ಮರ ಕಡಿಯುವುದನ್ನು ತಡೆದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ 67 ವರ್ಷದ ವೃದ್ಧನ ಮೇಲೆ ಮಚ್ಚು ಹಾಗೂ ಕೈಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾದ್ಲಿಗೆರೆ ಗ್ರಾಮದಲ್ಲಿ ನಡೆದಿದೆ.

ಹಾದ್ಲಿಗೆರೆ ಗ್ರಾಮದ ನಿವಾಸಿ ನಿಂಗೇಗೌಡ (67) ಹಲ್ಲೆಗೊಳಗಾದ ವೃದ್ಧ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಿಂಗೇಗೌಡರ ಪುತ್ರ ಎಚ್.ಎನ್. ಚಂದ್ರ ನೀಡಿದ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸರು ನಾಲ್ವರ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:
ಹಾದ್ಲಿಗೆರೆ ಗ್ರಾಮದ ಸರ್ವೆ ನಂಬರ್ 250ರಲ್ಲಿ ಚಂದ್ರ ಅವರ ತಾಯಿ ರತ್ನಮ್ಮ ಹಾಗೂ ಸರ್ವೆ ನಂಬರ್ 249ರಲ್ಲಿ ದೊಡ್ಡಮ್ಮ ಯಶೋದ ಅವರ ಹೆಸರಿನಲ್ಲಿ ಜಮೀನಿದೆ. ಈ ಜಮೀನಿನ ವಿಚಾರವಾಗಿ ಚಂದ್ರ ಅವರ ಕುಟುಂಬ ಹಾಗೂ ದೊಡ್ಡಪ್ಪ ಹಿರೇಗೌಡ ನಡುವೆ ದೀರ್ಘಕಾಲದಿಂದ ವಿವಾದವಿತ್ತು ಎನ್ನಲಾಗಿದೆ.
ನ.20ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಹಿರೇಗೌಡ ಹಾಗೂ ಅವರ ಪುತ್ರರಾದ ರಮೇಶ ಮತ್ತು ಕುಮಾರ್ ವಿವಾದಿತ ಜಮೀನಿನಲ್ಲಿ ಮರಗಳನ್ನು ಕಡಿಯುತ್ತಿದ್ದರು. ಇದನ್ನು ಗಮನಿಸಿದ ನಿಂಗೇಗೌಡ ಸ್ಥಳಕ್ಕೆ ತೆರಳಿ ಮರ ಕಡಿಯದಂತೆ ತಡೆದಿದ್ದರು. ಅಲ್ಲದೆ, ಚಂದ್ರ ಅವರು ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮರ ಕಡಿಯದಂತೆ ಸೂಚಿಸಿ ತೆರಳಿದ್ದರು.

ರಾತ್ರಿ ವೇಳೆ ಏಕಾಏಕಿ ದಾಳಿ:
ಅರಣ್ಯ ಇಲಾಖೆಗೆ ದೂರು ನೀಡಿದ ಸಿಟ್ಟಿನಲ್ಲಿ ಅದೇ ದಿನ (ನ.20) ರಾತ್ರಿ ಸುಮಾರು 8 ಗಂಟೆ ವೇಳೆಗೆ ಜಮೀನಿನ ಸಮೀಪದ ಮನೆಯ ಬಳಿ ನಿಂಗೇಗೌಡ ಮತ್ತು ಚಂದ್ರ ಇದ್ದಾಗ ಹಿರೇಗೌಡ, ಪುತ್ರರಾದ ರಮೇಶ, ಕುಮಾರ್ ಹಾಗೂ ಸೊಸೆ ನಾಗರತ್ನ @ ಜ್ಯೋತಿ ಏಕಾಏಕಿ ಬಂದು ಜಗಳ ತೆಗೆದಿದ್ದಾರೆ.
ಈ ವೇಳೆ ಕೊಲೆ ಮಾಡುವ ಉದ್ದೇಶದಿಂದ ರಮೇಶ ತಂದಿದ್ದ ಕೈಕೊಡಲಿಯಿಂದ ನಿಂಗೇಗೌಡರ ತಲೆಗೆ ಕಡಿದಿದ್ದು, ಹಿರೇಗೌಡ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಮಾರ್ ಕೈಯಿಂದ ಹಲ್ಲೆ ನಡೆಸಿದರೆ, ನಾಗರತ್ನ @ ಜ್ಯೋತಿ ಜಗಳ ಬಿಡಿಸಲು ಮುಂದಾದ ಚಂದ್ರ ಅವರನ್ನು ತಳ್ಳಿ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಗಲಾಟೆಯ ಬಳಿಕ ಆರೋಪಿಗಳು ಮಚ್ಚು ಮತ್ತು ಕೈಕೊಡಲಿಯನ್ನು ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ.

ಆಸ್ಪತ್ರೆಗೆ ದಾಖಲು, ಎಫ್‌ಐಆರ್ ದಾಖಲು:
ತೀವ್ರವಾಗಿ ಗಾಯಗೊಂಡಿದ್ದ ನಿಂಗೇಗೌಡರನ್ನು ಸಂಬಂಧಿಕರ ಕಾರಿನಲ್ಲಿ ತಕ್ಷಣ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಲ್ಲಿ ಗಾಯಾಳು ಪುತ್ರ ಚಂದ್ರ ನೀಡಿದ ದೂರಿನ ಆಧಾರದ ಮೇಲೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ರಮೇಶ (A1), ಹಿರೇಗೌಡ (A2), ಕುಮಾರ್ (A3) ಮತ್ತು ನಾಗರತ್ನ @ ಜ್ಯೋತಿ (A4) ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109(1) (ಕೊಲೆ ಯತ್ನ), 118(1), 115(2) ಹಾಗೂ 3(5) ಅಡಿಯಲ್ಲಿ (ಅಪರಾಧ ಸಂಖ್ಯೆ: 159/2026) ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!