ಮಾಡಾಳು/ಅರಸೀಕೆರೆ (kannadapost.com): ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಮಹಾನ್ ಚೇತನ ಬಸವಣ್ಣನವರ ಕುರಿತು ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ತಮ್ಮ ‘ಬಸವ ಮಂಟಪ’ ಕೃತಿ ಹಾಗೂ ಮಾಧ್ಯಮಗಳಲ್ಲಿ ಅತ್ಯಂತ ಹಗುರವಾಗಿ, ಅವಹೇಳನಕಾರಿಯಾಗಿ ಮಾತನಾಡಿರುವುದು ತೀವ್ರ ಖಂಡನೀಯ ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಿರಂಜನ ಪೀಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರವಿ ಹಂಜ್ ಎಂಬುವವರು ನಮ್ಮ ಸಾಂಸ್ಕೃತಿಕ ನಾಯಕನ ಬಗ್ಗೆ ಕುಚೋದ್ಯದ ಮಾತುಗಳನ್ನಾಡಿರುವುದು ಅಸಹನೀಯ. ಸಮಾಜದಲ್ಲಿ ಕ್ರಾಂತಿ ತಂದ ಮಹಾ ಮಾನವತಾವಾದಿ ಬಸವಣ್ಣನವರು ಕೇವಲ ಒಂದು ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಇಡೀ ಮನುಕುಲಕ್ಕೆ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ಸಂದೇಶ ನೀಡಿದ ಜಗತ್ತಿನ ಶ್ರೇಷ್ಠ ಗುರುಗಳು ಎಂದು ಬಣ್ಣಿಸಿದರು.
ಅಂತಹ ಮಹೋನ್ನತ ಚೇತನದ ಇತಿಹಾಸವನ್ನು ವಿಕೃತವಾಗಿ ಬಿಂಬಿಸುವುದು, ಅವರ ವ್ಯಕ್ತಿತ್ವಕ್ಕೆ ಅಪಹಸ್ಯ ಹಾಗೂ ಅವಹೇಳನ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಎಚ್ಚರಿಸಿದರು.
ಪುಸ್ತಕ ಮುಟ್ಟುಗೋಲು ನಿರ್ಧಾರಕ್ಕೆ ಸ್ವಾಗತ
ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಕೈಗೊಂಡಿರುವ ತ್ವರಿತ ಕ್ರಮವನ್ನು ಶ್ರೀ ರುದ್ರಮುನಿ ಸ್ವಾಮೀಜಿ ಮುಕ್ತವಾಗಿ ಸ್ವಾಗತಿಸಿದರು. “ಬಸವಣ್ಣನವರ ಘನತೆಗೆ ಧಕ್ಕೆ ತರುವಂತಹ ಇಂತಹ ಕೃತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಅತ್ಯಂತ ಸೂಕ್ತ ಕ್ರಮವಾಗಿದೆ. ಆದರೆ ಇಷ್ಟಕ್ಕೇ ಇದು ನಿಲ್ಲಬಾರದು. ಇತಿಹಾಸವನ್ನು ತಿರುಚಿ ಸಾಮಾಜಿಕ ಸಾಮರಸ್ಯ ಕೆಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.












