ಹಾಸನ ಮೂಲದ ಖ್ಯಾತ ವೈದ್ಯ ಡಾ. ಹಾರೂನ್ ಹುಸೇನ್ ಮಾರ್ಗದರ್ಶನದಲ್ಲಿ ಮಹತ್ವದ ಆವಿಷ್ಕಾರ: ವೆರಿಕೋಸ್ ವೇನ್ಸ್ ತಡೆಯುವ ‘ಸ್ಮಾರ್ಟ್ ಇನ್‌ಸೋಲ್’ಗೆ ಪೇಟೆಂಟ್ ಗರಿ!

ಮಂಗಳೂರು KMC ಮತ್ತು ಮಣಿಪಾಲ MIT ವಿದ್ಯಾರ್ಥಿಗಳ ತಂಡದ ಸಂಶೋಧನೆಗೆ ಭಾರತ ಸರ್ಕಾರದ ಪೇಟೆಂಟ್ ಪ್ರಕಟ; ಗಂಟೆಗಟ್ಟಲೆ ನಿಂತು ಕೆಲಸ ಮಾಡುವವರಿಗೆ ವರದಾನವಾಗಲಿರುವ ತಂತ್ರಜ್ಞಾನ

ಹಾಸನ/ಮಂಗಳೂರು, ನ. 22 (kannadapost.com): ಹಾಸನ ಮೂಲದ ಖ್ಯಾತ ವೈದ್ಯ ಹಾಗೂ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (KMC) ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹಾರೂನ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡವೊಂದು ವೈದ್ಯಕೀಯ ಲೋಕಕ್ಕೆ ವಿನೂತನ ಕೊಡುಗೆಯೊಂದನ್ನು ನೀಡಿದೆ.

ದೀರ್ಘಕಾಲ ನಿಂತು ಕೆಲಸ ಮಾಡುವವರಿಗೆ ಕಾಡುವ ‘ವೆರಿಕೋಸ್ ವೇನ್ಸ್’ (ರಕ್ತನಾಳಗಳ ಊತ) ಸಮಸ್ಯೆ ತಡೆಯಲು ಈ ತಂಡವು ಆವಿಷ್ಕರಿಸಿರುವ ‘ಸ್ಮಾರ್ಟ್ ಇನ್‌ಸೋಲ್’ (Smart Insole) ಸಾಧನಕ್ಕೆ ಭಾರತ ಸರ್ಕಾರದ ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್‌ಮಾರ್ಕ್‌ಗಳ ಮಹಾನಿಯಂತ್ರಕರ ಕಚೇರಿಯು ಅಧಿಕೃತ ಪೇಟೆಂಟ್ ಪ್ರಕಟಿಸಿದೆ.

​ಮಂಗಳೂರು ಕೆಎಂಸಿ ಮತ್ತು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ವಿದ್ಯಾರ್ಥಿಗಳ ಅಂತರಶಿಸ್ತೀಯ ತಂಡವು ಡಾ. ಹಾರೂನ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ. “ವಿದ್ಯುತ್ ಪ್ರಚೋದನೆ ನೀಡುವ ಧರಿಸಬಹುದಾದ ಸಾಧನ ಮತ್ತು ಅದರ ಅನುಷ್ಠಾನದ ವಿಧಾನ” (Wearable Device for Providing Electrical Stimulation and Method of Implementing Thereof) ಎಂಬ ಶೀರ್ಷಿಕೆಯಡಿ ಈ ಪೇಟೆಂಟ್ ಪ್ರಕಟಗೊಂಡಿದೆ.

​ಹೇಗೆ ಕೆಲಸ ಮಾಡುತ್ತದೆ ಈ ಸ್ಮಾರ್ಟ್ ಇನ್‌ಸೋಲ್?

ಶೂ ಅಥವಾ ಪಾದರಕ್ಷೆಯ ಒಳಭಾಗದಲ್ಲಿ ಅಳವಡಿಸಬಹುದಾದ ಈ ಸ್ಮಾರ್ಟ್ ಇನ್‌ಸೋಲ್‌ನಲ್ಲಿ ಅತ್ಯಾಧುನಿಕ ‘ಮೋಷನ್ ಸೆನ್ಸರ್’ (ಚಲನೆ ಗ್ರಹಿಸುವ ಸಂವೇದಕ) ಇದೆ. ವ್ಯಕ್ತಿಯು ಒಂದೇ ಕಡೆ ದೀರ್ಘಕಾಲ ನಿಂತಿರುವುದನ್ನು ಈ ಸೆನ್ಸಾರ್ ಸ್ವಯಂಚಾಲಿತವಾಗಿ ಗ್ರಹಿಸುತ್ತದೆ. ತಕ್ಷಣವೇ ಕಾಲಿನ ಮೀನಖಂಡದ ಸ್ನಾಯುಗಳಿಗೆ (Soleus ಮತ್ತು Gastrocnemius) ಸೌಮ್ಯವಾದ ವಿದ್ಯುತ್ ಪ್ರಚೋದನೆಯನ್ನು (Electrical Stimulation) ನೀಡುವ ಮೂಲಕ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ವ್ಯಕ್ತಿಯು ಮತ್ತೆ ನಡೆಯಲು ಆರಂಭಿಸಿದ ತಕ್ಷಣ ಈ ಸಾಧನವು ತನ್ನಷ್ಟಕ್ಕೆ ತಾನೇ ಆಫ್ ಆಗುತ್ತದೆ.

​ಯಾರಿಗೆ ಹೆಚ್ಚು ಉಪಯುಕ್ತ?

ಶಿಕ್ಷಕರು, ಸಂಚಾರಿ ಪೊಲೀಸರು, ಭದ್ರತಾ ಸಿಬ್ಬಂದಿ, ಶಸ್ತ್ರಚಿಕಿತ್ಸಕ ವೈದ್ಯರು, ನರ್ಸ್‌ಗಳು ಹಾಗೂ ಮಳಿಗೆಗಳಲ್ಲಿ ಗಂಟೆಗಟ್ಟಲೆ ನಿಂತು ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಮತ್ತು ವೆರಿಕೋಸ್ ವೇನ್ಸ್ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಅಂತಹ ವೃತ್ತಿಪರರಿಗೆ ಈ ಸಾಧನವು ವರದಾನವಾಗಲಿದೆ. ಅಲ್ಲದೆ, ಕಾಲಿನ ಸ್ನಾಯುಗಳ ಸಕ್ರಿಯಗೊಳಿಸುವಿಕೆಯ ಮೂಲಕ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (Glycaemic Control) ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧ್ಯತೆಯ ಕುರಿತೂ ಡಾ. ಹಾರೂನ್ ಹುಸೇನ್ ನೇತೃತ್ವದ ತಂಡವು ಮುಂದಿನ ಹಂತದ ಅಧ್ಯಯನ ನಡೆಸುತ್ತಿದೆ.

​ಸಂಶೋಧನಾ ತಂಡದ ವಿವರ:

ಹಾಸನದ ಡಾ. ಹಾರೂನ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜಂಟಿಯಾಗಿ ಈ ಸಂಶೋಧನೆ ನಡೆಸಿದ್ದಾರೆ:

  • ​ಆಕಾಂಕ್ಷಾ ಗಿರೀಶ್ ಪೈ (MBBS 2024 ಬ್ಯಾಚ್, KMC ಮಂಗಳೂರು)
  • ​ಉದ್ಭವ್ ಝಾ (MBBS 2024 ಬ್ಯಾಚ್, KMC ಮಂಗಳೂರು)
  • ​ಪೆದಬಲ್ಲೆ ಸಶ್ರೀಕ್ ರೆಡ್ಡಿ (ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, MIT ಮಣಿಪಾಲ)

​ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಸಂಸ್ಥೆಯ ಹೆಸರಿನಲ್ಲಿ ಆ. 20ರಂದು ಪೇಟೆಂಟ್ ಅರ್ಜಿ (ಸಂಖ್ಯೆ: 202641100848 A) ಸಲ್ಲಿಸಲಾಗಿದ್ದು, ನ. 20ರಂದು ಅಧಿಕೃತವಾಗಿ ಪ್ರಕಟಗೊಂಡಿದೆ. ಹಾಸನದ ವೈದ್ಯರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಜಿಲ್ಲೆಯ ವೈದ್ಯಕೀಯ ವಲಯ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.