​”ಹಾಸನದ ಜನರ ಜೀವಕ್ಕೆ ಬೆಲೆ ಜಾಸ್ತಿ ಇದೆಯಾ, ಚಿಕ್ಕಮಗಳೂರಿನ ಜನರ ಜೀವಕ್ಕೆ ಬೆಲೆ ಕಡಿಮೆ ಇದೆಯಾ?”: ನಾಳೆ ಮೂವರು ಕಾಂಗ್ರೆಸ್ ಶಾಸಕರ ರಾಜೀನಾಮೆ

ಹಾಸನದಿಂದ ಚಿಕ್ಕಮಗಳೂರಿಗೆ ಆನೆಗಳನ್ನು ಓಡಿಸುತ್ತಿರುವುದಕ್ಕೆ ತೀವ್ರ ಆಕ್ರೋಶ; ಹಾಸನ ಡಿಎಫ್‌ಓ ಹರೀಶ್ ಅಮಾನತಿಗೆ ಪಟ್ಟು

  • ಹಾಸನದಿಂದ ಚಿಕ್ಕಮಗಳೂರಿಗೆ ಕಾಡಾನೆಗಳನ್ನು ಬಲವಂತವಾಗಿ ಓಡಿಸುತ್ತಿರುವ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಶಾಸಕರಾದ ನಯನ ಮೋಟಮ್ಮ, ಟಿ.ಡಿ. ರಾಜೇಗೌಡ, ಹೆಚ್.ಡಿ. ತಮ್ಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನಾಳೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು(kannadapost.com): ಹಾಸನ ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯದತ್ತ ಓಡಿಸುತ್ತಿರುವ (ಡ್ರೈವ್ ಮಾಡುತ್ತಿರುವ) ಅರಣ್ಯ ಇಲಾಖೆ ಮತ್ತು ಸರ್ಕಾರದ ಕ್ರಮಕ್ಕೆ ಮಲೆನಾಡಿನ ಕಾಂಗ್ರೆಸ್ ಶಾಸಕರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿಯೊಳಗೆ ಆನೆಗಳನ್ನು ವಾಪಸ್ ಕಳುಹಿಸದಿದ್ದರೆ ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮೂವರು ಶಾಸಕರು ಎಚ್ಚರಿಕೆ ನೀಡಿದ್ದಾರೆ.

​ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಜಂಟಿಯಾಗಿ ಸರ್ಕಾರದ ಈ ನಡೆಯನ್ನು ಖಂಡಿಸಿದ್ದಾರೆ. ಊರಿನಲ್ಲಿಲ್ಲದ ಕಾರಣ ತರೀಕೆರೆ ಶಾಸಕ ಶ್ರೀನಿವಾಸ್ ಅವರು ಸಹ ಈ ಕ್ರಮವನ್ನು ವಿರೋಧಿಸಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.

​‘ನಮಗೆ ಅಧಿಕಾರಕ್ಕಿಂತ ಜನರ ಪ್ರಾಣ ಮುಖ್ಯ’

“ಹಾಸನದ ಜನರ ಜೀವಕ್ಕೆ ಬೆಲೆ ಜಾಸ್ತಿ ಇದೆಯಾ? ಚಿಕ್ಕಮಗಳೂರಿನ ಜನರ ಜೀವಕ್ಕೆ ಬೆಲೆ ಕಡಿಮೆ ಇದೆಯಾ?” ಎಂದು ಸರ್ಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನು ಶಾಸಕರು ನೇರವಾಗಿ ಪ್ರಶ್ನಿಸಿದ್ದಾರೆ. ಸಚಿವ ಶಿವಲಿಂಗೇಗೌಡರ ಅಣತಿಯಂತೆ ಬೇಲೂರಿನಿಂದ 50ಕ್ಕೂ ಹೆಚ್ಚು ಕಾಡಾನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಅಟ್ಟಲಾಗುತ್ತಿದೆ ಎಂದು ಆರೋಪಿಸಿರುವ ಶಾಸಕರು, “ನಮಗೆ ಅಧಿಕಾರಕ್ಕಿಂತ ನಮ್ಮ ಜಿಲ್ಲೆಯ ಜನರ ಪ್ರಾಣ ಮುಖ್ಯ. ಜನರ ಸಾವು-ನೋವು, ಬೆಳೆ ನಾಶವನ್ನು ಕಣ್ಣಾರೆ ನೋಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.

​ಹಾಸನ ಡಿಎಫ್‌ಓ ಅಮಾನತಿಗೆ ಆಗ್ರಹ

ಈ ಎಲ್ಲಾ ಗೊಂದಲಗಳಿಗೆ ಹಾಸನ ಜಿಲ್ಲೆಯ ಡಿಎಫ್‌ಓ (DFO) ಹರೀಶ್ ಅವರ ಬೇಜವಾಬ್ದಾರಿ ನಡೆಯೇ ಕಾರಣ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. “ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ, ಸ್ಥಳೀಯ ಶಾಸಕರು, ರೈತ ಸಂಘ ಅಥವಾ ಪ್ಲಾಂಟರ್ಸ್ ಅಸೋಸಿಯೇಷನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಆನೆಗಳನ್ನು ನಮ್ಮ ಜಿಲ್ಲೆಗೆ ಓಡಿಸಲಾಗುತ್ತಿದೆ. ಕೂಡಲೇ ಹಾಸನ ಡಿಎಫ್‌ಓ ಹರೀಶ್ ಅವರನ್ನು ಅಮಾನತು ಮಾಡಬೇಕು” ಎಂದು ತಮ್ಮದೇ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

​ಸರ್ಕಾರದಿಂದ ತಕ್ಷಣದ ಭರವಸೆ

ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಹತ್ತಾರು ಮಂದಿ ಬಲಿಯಾಗಿದ್ದು, ಮೊನ್ನೆಯಷ್ಟೇ ಎನ್.ಆರ್. ಪುರ ತಾಲೂಕಿನ ಹೆಣ್ಣಿಯಲ್ಲಿ ಕೃಷ್ಣಮೂರ್ತಿ ಎಂಬ ರೈತ ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹೊರಗಿನಿಂದ ಆನೆಗಳನ್ನು ತಂದರೆ ಜನರೇ ತಿರುಗಿಬೀಳುವ ಅಪಾಯವಿದೆ ಎಂದು ಶಾಸಕರು ಎಚ್ಚರಿಸಿದ್ದಾರೆ. ಶಾಸಕರ ತೀವ್ರ ವಿರೋಧದ ಬೆನ್ನಲ್ಲೇ, ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ಆನೆ ಓಡಿಸುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ, ಅವು ಸ್ವತಂತ್ರವಾಗಿ ತಮ್ಮ ಮೂಲ ನೆಲೆಗೆ ತೆರಳಲು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.