ಸಕಲೇಶಪುರ: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ 538ನೇ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ತ್ಯಾಗಮಯ ಜೀವನದಿಂದ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಇಂತಹ ಪುರುಷೋತ್ತಮರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾಮಾನ್ಯ ನಾಗರಿಕರೆಲ್ಲರೂ ಇಂತಹ ಭಕ್ತಿ ಪರಂಪರೆಯ ಆಚರಣೆಯಲ್ಲಿ ಪಾಲ್ಗೊಂಡರೆ ಅದು ಸಮಾಜದಲ್ಲಿ ಏಕತೆಯ ಭಾವನೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಕನಕದಾಸರು ಹಾಗೂ ಇವರಿಗೆ ಸಮಾನರಾದ ಮಹನೀಯರು ಮಾನವೀಯತೆ, ಸಮಾನತೆ ಮತ್ತು ನಂಬಿಕೆಯ ನೈಜ ಉದಾಹರಣೆ. ಅವರ ಜೀವನವು ನಮ್ಮೆಲ್ಲರಿಗೂ ಪ್ರೇರಣೆ. ಬೇರೆ ದೇಶಗಳಲ್ಲಿ ಇತಿಹಾಸವೆಂದರೆ ಕಲ್ಲಿನ ಕಟ್ಟಡಗಳು, ಕೋಟೆಗಳು; ಆದರೆ ನಮ್ಮ ದೇಶದಲ್ಲಿ ಇತಿಹಾಸವೆಂದರೆ ಭಕ್ತರ ತ್ಯಾಗ, ಅವರ ಜೀವನ ಪಾಠಗಳು ಮತ್ತು ನೈಜ ಘಟನೆಗಳು. ಈ ನೈಜ ಇತಿಹಾಸವೇ ಭಾರತದ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಮಾತನಾಡಿ, ಕನಕದಾಸರು ಕೇವಲ ಭಕ್ತರಾಗಿಯೇ ಅಲ್ಲ, ಸಾಮಾಜಿಕ ಸುಧಾರಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಅವರು ವರ್ಣಭೇದ, ಜಾತಿಭೇದದ ವಿರುದ್ಧ ನಿಂತು ‘ಮಾನವ ಕುಲವೇ ಒಂದು’ ಎಂಬ ಸಂದೇಶ ನೀಡಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲೂ ಸಹ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ದಿನನಿತ್ಯ ಹಲವು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ನಮ್ಮ ತಾಲೂಕಿನ ಬೆಳಗೋಡು ಹೋಬಳಿಯ ಭಾಗ್ಯ ಗ್ರಾಮದಲ್ಲಿ ಅಲ್ಪಸಂಖ್ಯಾತರಿಗೆ ಸೇರಿದ ಸ್ಮಶಾನದಲ್ಲಿ ಸವ ಸಂಸ್ಕಾರಕ್ಕೆ ಮುಂದಾದಾಗ, ಸಮೀಪದ ನಿವಾಸಿಗಳು ನಮ್ಮ ಮನೆಯ ಮುಂದೆ ನೀವು ಸಂಸ್ಕಾರ ಮಾಡುವುದು ಸರಿಯಲ್ಲ ಎಂದು ಹೇಳಿ ವಿರೋಧ ವ್ಯಕ್ತಪಡಿಸಿರುವ ಘಟನೆ ಸೇರಿದಂತೆ ದೇಶದ ಯುಪಿ ಹಾಗೂ ರಾಜ್ಯದ ಇತರ ಭಾಗಗಳಲ್ಲಿಯೂ ಇಂತಹ ತಾರತಮ್ಯಗಳು ಮುಂದುವರಿದಿವೆ. ಕನಕದಾಸರ ಕಾಲದಲ್ಲಿ ಈ ಅನ್ಯಾಯಗಳು ಉತ್ತುಂಗದಲ್ಲಿದ್ದವು ಇವುಗಳನ್ನ ಇವುಗಳ ವಿರುದ್ಧ ಹೋರಾಟ ನಡೆಸಿ ಭಕ್ತ ಕನಕದಾಸರಾದಾರು ಎಂದು ಹೇಳಿದರು. ಇಂದಿನ ಪೀಳಿಗೆ ಕನಕದಾಸರ ಜೀವನ ಮೌಲ್ಯಗಳನ್ನು ಅರಿತು, ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಮೂಲಕ ಭಕ್ತಿ ಮತ್ತು ಮಾನವೀಯತೆ ಬೆಳೆಸುವುದು ಕಾಲದ ಅವಶ್ಯಕತೆ ಎಂದು ಹೇಳಿದರು.
ಕುರುಬ ಸಮಾಜದ ತಾಲೂಕು ಅಧ್ಯಕ್ಷ ಸೋಮೇಗೌಡ ಮಾತನಾಡಿ, ಕನಕದಾಸರು ದೇವರ ಭಕ್ತರಾಗಿದ್ದಷ್ಟೇ ಅಲ್ಲ, ಅಸಹಿಷ್ಣುತೆಯ ವಿರುದ್ಧ ಹೋರಾಡಿದ ಧೈರ್ಯಶಾಲಿ ತತ್ತ್ವಜ್ಞಾನಿ. ಅವರು ತೋರಿಸಿದ ಮಾರ್ಗವೇ ಸಮಾನತೆ ಮತ್ತು ಸೌಹಾರ್ದತೆಯ ದಾರಿ. ನಮ್ಮಲ್ಲಿ ಎಲ್ಲರಿಗೂ ಅವರ ಬೋಧನೆ ಅಗತ್ಯ. ಅವರು ಸಮಾಜದ ಅಡಿಪಾಯವನ್ನು ಬಲಪಡಿಸಿದ ನಿಜವಾದ ಕ್ರಾಂತಿಕಾರರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ರಾಮೇಗೌಡ, ಪ್ರಾಂಶುಪಾಲ ಸತೇಂದ್ರ, ಕಾಂಗ್ರೆಸ್ ಮುಖಂಡ ವೈ.ಪಿ. ರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಕನಕ ಜಯಂತಿ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭವಾದ ಹಿನ್ನೆಲೆಯಲ್ಲಿ .ಎಲ್.ಡಿ. ಬ್ಯಾಂಕ್ ನಿರ್ದೇಶಕ ಮತ್ತು ದಲಿತ ಮುಖಂಡ ಒಲಲಳ್ಳಿ ವೀರೇಶ್ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ದೂರದ ಹಳ್ಳಿಗಳಿಂದ 50–60 ಕಿಲೋಮೀಟರ್ ಪ್ರಯಾಣಿಸಿ ಬಂದ ಜನರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿಗದಿತ ಸಮಯಕ್ಕೆ ಕಾರ್ಯಕ್ರಮಕ್ಕೆ ಹಾಜರಾಗದೇ ಜನರನ್ನು ನಿರ್ಲಕ್ಷಿಸುವುದು ಅಸಮಂಜಸ. ಇಂತಹ ನಿರ್ಲಕ್ಷ್ಯ ಕನಕದಾಸರಂತಹ ಮಹಾನ್ ಭಕ್ತನಿಗೆ ತೋರಿಸಿದ ಅವಮಾನವೇ ಸರಿ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿ ಕೇವಲ ಪ್ರೋಟೋಕಾಲ್ ಪಾಲನೆಗಾಗಿ ಕಾರ್ಯಕ್ರಮ ನಡೆಸುವುದಾದರೆ ಅದರ ಅರ್ಥವೇ ನಾಶವಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ಭಕ್ತಿ, ಶ್ರದ್ಧೆ ಮತ್ತು ಶಿಸ್ತಿನಿಂದ ನಡೆಯಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಯದ ಗೌರವವನ್ನು ಅರಿತು ನಡೆದುಕೊಳ್ಳಬೇಕಿದೆ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಿದರೆ ಸಭೆಯಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.










