Sakaleshpur: ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವರ ಮಿಡ್ ನೈಟ್ ಮೀಟಿಂಗ್: ಕಣ್ಣೀರಿಟ್ಟ ನರ್ಸ್- ಸಚಿವರ ಕಾರ್ಯವೈಖರಿಗೆ ತಲೆದೂಗಿದ ಶಾಸಕ ಸಿಮೆಂಟ್ ಮಂಜು

  • Sakaleshpur ಜೂನ್ 13: ಆರೋಗ್ಯ ಇಲಾಖೆಯ ಕಾರ್ಯಕ್ಷಮತೆ ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ರಾತ್ರಿ ತಡರವರೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ರಾತ್ರಿ 11.30ಕ್ಕೆ ಆರಂಭವಾದ ಸಭೆ ಮುಂಜಾನೆ 2 ಗಂಟೆಯವರೆಗೆ ಮುಂದುವರಿದಿದ್ದು, ಆರೋಗ್ಯ ಇಲಾಖೆಯ ವಿವಿಧ ಸಮಸ್ಯೆಗಳ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

(Sakaleshpur)ತಾಲೂಕು ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ, ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಆರೋಗ್ಯ ಸೇವೆಗಳ ಬಗ್ಗೆ ಸಚಿವರು ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಚಿವರ ಮುಂದೆ ಕಣ್ಣೀರಿಟ್ಟ ಸ್ಟಾಫ್ ನರ್ಸ್

ಸಭೆಯ ವೇಳೆ ಭಾವನಾತ್ಮಕ ಘಟನೆಯೊಂದು ನಡೆಯಿತು. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ ಒಬ್ಬರು ಆರೋಗ್ಯ ಸಚಿವರ ಎದುರು ಕಣ್ಣೀರಿಟ್ಟು ತಮ್ಮ ನೋವನ್ನು ಹಂಚಿಕೊಂಡರು.

“ನಮಗೂ ವಯಸ್ಸಾಗುತ್ತಿದೆ. ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಅವರ ವಿದ್ಯಾಭ್ಯಾಸ, ಮನೆಯ ನಿರ್ವಹಣೆ ಎಲ್ಲವೂ ಕಷ್ಟವಾಗುತ್ತಿದೆ. 17 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕೇವಲ ₹17 ಸಾವಿರ ಸಂಬಳ ಪಡೆಯುತ್ತಿದ್ದೇವೆ. ಈ ಸಂಬಳದಲ್ಲಿ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ” ಎಂದು ನರ್ಸ್ ಭಾವುಕರಾಗಿ ಮನವಿ ಮಾಡಿದರು.

ಇದೇ ವೇಳೆ, “ತಾಯಿ ಮಕ್ಕಳ ಭಾಗ್ಯ ಯೋಜನೆಯಡಿ 13 ವರ್ಷಗಳಿಂದ ಸೇವೆ ಸಲ್ಲಿಸಿದ್ದೇವೆ. ಆದರೆ ವೇತನದಲ್ಲಿ ಯಾವುದೇ ಗಣನೀಯ ಏರಿಕೆ ಆಗಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡರು.

ಸಮಸ್ಯೆ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ: ಖಾದರ್

ನರ್ಸ್ ಅವರ ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, “ನೀವು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ನೀವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಮಧ್ಯರಾತ್ರಿಯನ್ನೂ ಮೀರಿ ಆಸ್ಪತ್ರೆಯಲ್ಲೇ ಉಳಿದು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಸಚಿವರ ಕಾರ್ಯವೈಖರಿ ಹಾಗೂ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಧ್ಯರಾತ್ರಿ 2 ಗಂಟೆಯವರೆಗೂ ಸಭೆ: ಆರೋಗ್ಯ ಸಚಿವ ಖಾದರ್ ಕಾರ್ಯಕ್ಕೆ ಬಿಜೆಪಿ ಶಾಸಕ ಸಿಮೆಂಟ್ ಮಂಜು ಮೆಚ್ಚುಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ U. T. Khader ಅವರ ಕಾರ್ಯವೈಖರಿಯನ್ನು ಬಿಜೆಪಿ ಶಾಸಕ Cement Manju ಮುಕ್ತಕಂಠದಿಂದ ಶ್ಲಾಘಿಸಿದ್ದು, ಆರೋಗ್ಯ ಇಲಾಖೆಗೆ ಸೂಕ್ತ ವ್ಯಕ್ತಿಯನ್ನು ಸಚಿವರನ್ನಾಗಿ ನೇಮಿಸಿರುವುದಕ್ಕೆ ಮುಖ್ಯಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.