- ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರವಾಲೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕರು ಬಲಿಯಾಗಿದ್ದು, ಹಸುವಿಗೆ ಗಂಭೀರ ಗಾಯವಾಗಿದೆ. ಆನೆ ಸ್ಥಳಾಂತರಿಸಲು ಗ್ರಾಮಸ್ಥರ ಆಗ್ರಹ.
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಒಂಟಿಸಲಗವೊಂದು ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿದ ಪರಿಣಾಮ ಕರುವೊಂದು ಬಲಿಯಾಗಿರುವ ದಾರುಣ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಕಿರವಾಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಡಾನೆಯ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ವಿವರ:
ಗ್ರಾಮದ ಯತೀಶ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ರಾತ್ರಿ ವೇಳೆ ಒಂಟಿಸಲಗ ನುಗ್ಗಿದೆ. ಕೊಟ್ಟಿಗೆಯಲ್ಲಿದ್ದ ಹಸು ಹಾಗೂ ಕರುವಿನ ಮೇಲೆ ಏಕಾಏಕಿ ದಾಳಿ ನಡೆಸಿದ ಗಜರಾಜ, ತನ್ನ ಸೊಂಡಲಿನಿಂದ ಕರುವನ್ನು ಜೋರಾಗಿ ನೂಕಿದ್ದಾನೆ. ಆನೆಯ ಬಲವಾದ ಏಟಿಗೆ ಕರು ಸ್ಥಳದಲ್ಲೇ ಪ್ರಾಣಬಿಟ್ಟಿದೆ. ಅಲ್ಲದೆ, ಪಕ್ಕದಲ್ಲೇ ಇದ್ದ ಹಸುವಿನ ಮೇಲೂ ಕಾಡಾನೆ ದಾಳಿ ಮಾಡಿದ್ದು, ಹಸು ಗಂಭೀರವಾಗಿ ಗಾಯಗೊಂಡಿದೆ.
ಕಾಫಿ ತೋಟದಲ್ಲೇ ಬೀಡುಬಿಟ್ಟ ಆನೆ, ಹೆಚ್ಚಾದ ಆತಂಕ:
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಸಿದ ಕಾಡಾನೆ ಇನ್ನೂ ಅದೇ ಗ್ರಾಮದ ಕಾಫಿ ತೋಟದಲ್ಲೇ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ತೋಟದ ಕೆಲಸಗಳಿಗೆ ಹೋಗಲು ಕಾರ್ಮಿಕರು ಹಾಗೂ ಬೆಳೆಗಾರರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಸ್ಥರ ಆಗ್ರಹ:
“ಈ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಈಗ ಮೂಕ ಪ್ರಾಣಿಗಳ ಮೇಲೆ ದಾಳಿ ಮಾಡಿರುವ ಆನೆ, ನಾಳೆ ಮನುಷ್ಯರ ಮೇಲೂ ಎರಗುವ ಅಪಾಯವಿದೆ. ಪ್ರಾಣ ಕೈಯಲ್ಲಿಡಿದುಕೊಂಡು ಬದುಕುವಂತಾಗಿದೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು” ಎಂದು ಕಿರವಾಲೆ ಗ್ರಾಮಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಒತ್ತಾಯಿಸಿದ್ದಾರೆ.












