ಅರಸೀಕೆರೆ (kannadapost.com): ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯವರ 167ನೇ ವರ್ಷದ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಜರುಗುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬರುತ್ತಿದೆ.
ದೇವಸ್ಥಾನದಲ್ಲಿ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಗೆ ತ್ರಿಕಾಲ ಪೂಜೆಗಳು ನಡೆಯುತ್ತಿವೆ. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಭಕ್ತರ ಹರಕೆ ಸಲ್ಲಿಕೆ:
ಕರ್ಪೂರ ಪ್ರಿಯೆಯಾದ ಗೌರಮ್ಮ ತಾಯಿಗೆ ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ವಿಶೇಷ ಹರಕೆಗಳನ್ನು ತೀರಿಸುತ್ತಿದ್ದಾರೆ. ದೇವಾಲಯದ ಮುಂಭಾಗದಲ್ಲಿರುವ ಅಗ್ನಿ ಕುಂಡಕ್ಕೆ ಕರ್ಪೂರ ಹಾಕಿ, ತಲೆಯ ಮೇಲೆ ದುಗ್ಗಳದ ಬಟ್ಟಲನ್ನು ಹೊತ್ತು ಶ್ರದ್ಧಾಭಕ್ತಿಯಿಂದ ಹರಕೆ ತೀರಿಸುವ ದೃಶ್ಯಗಳು ಜಾತ್ರೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿವೆ.
ಗಣ್ಯರ ಭೇಟಿ ಹಾಗೂ ಪೂಜೆ:
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ನಾಯಕರು, ಪದಾಧಿಕಾರಿಗಳು ಹಾಗೂ ಸರ್ಕಾರದ ಹಿರಿಯ-ಕಿರಿಯ ಅಧಿಕಾರಿಗಳು ದೇವಾಲಯಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ.
ಜಿಲ್ಲಾ ಎಸ್ಪಿ ಭೇಟಿ ಹಾಗೂ ಸೂಚನೆ:
ಮಂಗಳವಾರ ಮಧ್ಯಾಹ್ನ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭನ್ವಿತಾ ಅವರು ದೇವಾಲಯಕ್ಕೆ ಭೇಟಿ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಆಗಮಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ನೂಕುನುಗ್ಗಲು ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ತಮ್ಮ ಜತೆಯಲ್ಲಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅರಸೀಕೆರೆ ಪೊಲೀಸ್ ವಿಭಾಗದ ಡಿವೈಎಸ್ಪಿ ಗೋಪಿ, ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್, ಬಾಣಾವರ ಪಿಎಸ್ಐ ಸುರೇಶ್ ಹಾಜರಿದ್ದರು.
ಹಾಗೆಯೇ, ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ, ಮಾಡಾಳು ಶಿವಲಿಂಗಪ್ಪ, ಮುಖಂಡರಾದ ಎಂ.ಸಿ. ನಟರಾಜ, ಕೊಡ್ಲಿ ಬಸವರಾಜ, ಎಂ.ಜಿ. ಶಿವಣ್ಣ, ಅಶೋಕ್, ಮರುಳಸಿದ್ದ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.











