ಅರಸೀಕೆರೆ (kannadapost.com): ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಶಕ್ತಿದೇವತೆ ಹಾಗೂ ‘ಮೂಗುತಿ ಸುಂದರಿ’ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಿಯನ್ನು ಗೌರಿ ಹಬ್ಬದ (ಭಾದ್ರಪದ ಮಾಸದ ತದಿಗೆ) ಶುಭ ಸಂದರ್ಭದಲ್ಲಿ ನೂತನ ದೇವಾಲಯದಲ್ಲಿ ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾಯಿತು.
ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ದಿವ್ಯ ಸಾನ್ನಿಧ್ಯದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರ ಪ್ರತಿಷ್ಠಾಪನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಮೂಗುತಿ ಧಾರಣೆ ಮತ್ತು ಅದ್ಧೂರಿ ಮೆರವಣಿಗೆ:
ಇಂದು ಬೆಳಿಗ್ಗೆ ಮೂಲ ಸನ್ನಿಧಿಗೆ ಆಗಮಿಸಿದ ಕೋಡಿ ಮಠದ ಶ್ರೀಗಳು, ದೇವರ ಮನೆಯಲ್ಲಿ ಲಿಂಗಪೂಜಾ ಅನುಷ್ಠಾನ ನೆರವೇರಿಸಿದರು. ಬಳಿಕ ಜಗನ್ಮಾತೆ ಸ್ವರ್ಣ ಗೌರಿಯಮ್ಮನವರಿಗೆ ಮೂಗುತಿ ಧಾರಣೆ ಮಾಡಿ ಆಶೀರ್ವದಿಸಿದರು. ಇದೇ ವೇಳೆ ಮುತ್ತೈದೆಯರು ಗಂಗಾ ಬಾವಿಗೆ ತೆರಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಆರಾಧ್ಯ ದೈವ ಶ್ರೀ ಚನ್ನಬಸವೇಶ್ವರ ಸ್ವಾಮಿ ಹಾಗೂ ಶ್ರೀಗಳ ಸಮ್ಮುಖದಲ್ಲಿ ಕರಡೇವು ಮತ್ತು ಮಂಗಳವಾದ್ಯಗಳೊಂದಿಗೆ ಅಮ್ಮನವರ ಉತ್ಸವ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಯರೇಹಳ್ಳಿ ರಸ್ತೆ ಬದಿಯಲ್ಲಿರುವ ನೂತನ ಗೌರಮ್ಮದೇವಿ ದೇವಾಲಯವನ್ನು ತಲುಪಿತು. ಅಲ್ಲಿ ಶ್ರೀಗಳ ನೇತೃತ್ವದಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಲಾಯಿತು.
ಗುರು ಕಾರುಣ್ಯದಿಂದ ಬದುಕು ಸಮೃದ್ಧ:
ದೇವಿ ಪ್ರತಿಷ್ಠಾಪನೆಯ ನಂತರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಚೇತನ್ ಮರಿದೇವರು, “ಮಾನವನ ಬದುಕಿನಲ್ಲಿ ಶಿವಜ್ಞಾನದ ಬೀಜವನ್ನು ಬಿತ್ತಿ, ಸತ್ಸಂಸ್ಕಾರವನ್ನು ಕಲಿಸುವಾತನೇ ನಿಜವಾದ ಗುರು. ಮನುಷ್ಯನ ಬಾಳು ಚಿಗುರೊಡೆದು ಸಮೃದ್ಧವಾಗಲು ಗುರು ಕಾರುಣ್ಯ ಅತ್ಯಂತ ಮುಖ್ಯ. ಭಕ್ತಿಯ ಭಾವ ತುಂಬಿದ ಭಕ್ತನ ಹೃದಯವೇ ಭಗವಂತ ನೆಲೆಸಿರುವ ನಿಜವಾದ ಗುಡಿ ಎಂದು ನಮ್ಮ ಪೂಜ್ಯರು ಬೋಧಿಸಿದ್ದಾರೆ” ಎಂದು ನುಡಿದರು.
ಕಣ್ಮನ ಸೆಳೆಯುತ್ತಿರುವ ಮಾಡಾಳು ಗ್ರಾಮ:
ಸುಮಾರು 167 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಈ ಗ್ರಾಮವು ಜಾತ್ರಾ ಮಹೋತ್ಸವದ ಅಂಗವಾಗಿ ನವವಧುವಿನಂತೆ ಕಂಗೊಳಿಸುತ್ತಿದೆ. ಗ್ರಾಮದೆಲ್ಲೆಡೆ ಮಾವಿನ ತಳಿರು ತೋರಣ, ಬಾಳೆಕಂದುಗಳಿಂದ ಶೃಂಗಾರ ಮಾಡಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ.
ನೂತನ ದೇವಾಲಯದಲ್ಲಿ ದೇವಿಗೆ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯಲಿದ್ದು, ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಲು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಭಕ್ತರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.











