ಹಾಸನ: ಟೆಕ್ನಾಲಜಿಯ ವೇಗದ ಅಭಿವೃದ್ಧಿಯ ಹಿನ್ನಲೆಯಲ್ಲಿ, ಅರ್ಟಿಫೀಷಲ್ ಇಂಟೆಲಿಜೆನ್ಸ್ (Artificial Intelligence) ಅವಶ್ಯಕತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರ್.ಟಿ. ದ್ಯಾವೇಗೌಡ ಅಭಿಪ್ರಾಯಪಟ್ಟರು.
ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ವತಿಯಿಂದ AICTE ಹಾಗೂ ATAL ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಜನರೇಟೀವ್ ಎಐ ಪರಿಚಯ” ಕುರಿತಾಗಿ ರಾಜ್ಯ ಮತ್ತು ಅಂತಾರಾಜ್ಯ ಇಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಹಾಗೂ ತರಬೇತುದಾರರಿಗೆ ಏರ್ಪಡಿಸಲಾಗಿದ್ದ ಆರು ದಿನಗಳ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹೊಸ ಸವಾಲುಗಳು, ವಿಷಯಗಳು, ಮತ್ತು ಪಾಯೋಗಿಕ ವಿಧಾನಗಳನ್ನು ತಿಳಿಯಬೇಕಾದ ಅಗತ್ಯ ಇದೆ. ಅರ್ಟಿಫೀಷಲ್ ಇಂಟೆಲಿಜೆನ್ಸ್‌ನಂತಹ ತಂತ್ರಜ್ಞಾನಗಳು ಜ್ಞಾನಾರ್ಜನೆ ಹಾಗೂ ವೇಗದ ಕಾರ್ಯನಿರ್ವಹಣೆಗೆ ಅಗತ್ಯವಾದ ಸಾಧನಗಳಾಗಿವೆ. ಹೀಗಾಗಿ ಅಧ್ಯಾಪಕರು ಹಾಗೂ ಸಂಶೋಧಕರಿಗೆ ತರಬೇತಿ ಅತ್ಯಾವಶ್ಯಕ” ಎಂದು ಹೇಳಿದರು.
ಅವರು ಮತ್ತಷ್ಟು ಮಾಹಿತಿ ನೀಡುತ್ತಾ, “ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಅರ್ಟಿಫೀಷಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಕಳೆದ ವರ್ಷದಿಂದ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್, ಶಿಬಿರಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೈಸೂರು ಇನ್ಫೋಸಿಸ್‌ನ ಹಿರಿಯ ವ್ಯವಸ್ಥಾಪಕಿ ಪುಷ್ಪಲತಾ ದೇವೇಂದ್ರ ಅವರು, “ಅರ್ಟಿಫೀಷಲ್ ಇಂಟೆಲಿಜೆನ್ಸ್‌ನ ಮೂಲಭೂತ ಅಂಶಗಳು ಮತ್ತು ಅದರ ಉಪಯೋಗಗಳ ಅರಿವು ಅಗತ್ಯ. ಜನರೇಟೀವ್ ಎಐ ತಂತ್ರಜ್ಞಾನವು ನಾಳೆಯ ಬುದ್ಧಿವಂತ ವ್ಯವಸ್ಥೆಗಳ ಮೂಲ” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಅಮರೇಂದ್ರ ಅವರು, ತರಬೇತಿ ಶಿಬಿರದ ಅಗತ್ಯತೆಯನ್ನು ವಿವರಿಸಿ, “ಇಂತಹ ಶಿಬಿರಗಳು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪ್ರಾಯೋಗಿಕ ನೈಪುಣ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತವೆ” ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ಇಫೋ ಶಾಲೆಯ ಉಪಾಧ್ಯಕ್ಷ ಬಿ.ಆರ್. ರಾಜಶೇಖರ್, ಎವಿಕೆ ಪಿಯುಸಿ ಕಾಲೇಜಿನ ಉಪಾಧ್ಯಕ್ಷ ನಾಗರಾಜ್ ಜ್ಯೇನ್, ಸಂಸ್ಥೆಯ ನಿರ್ದೇಶಕರು ಸುರೇಶ್, ಶಾಂತಿಗ್ರಾಮ ಶಂಕರ್, ಹಾಗೂ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ಬಿ. ರಮೇಶ್ ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕರಾಗಿ ಡಾ. ಜೆ. ಚಂದ್ರಿಕಾ, ಸಂಪನ್ಮೂಲ ವ್ಯಕ್ತಿಗಳಾಗಿ ಇನ್ಫೋಸಿಸ್ ಪ್ರೋಗ್ರಾಂ ಮ್ಯಾನೇಜರ್ ಕಿರಣ್ ಎನ್.ಜಿ, ಟಿಸಿಎಸ್ ವರ್ಕ್‌ಫೋರ್ಸ್ ಮ್ಯಾನೇಜರ್ ಡಾ. ಶ್ರೀನಿವಾಸ್ ರಿಮನುಜಂ ಕಂದೂರಿ, ಮೇಘಾ ವಿಜಯ್, ಡಾ. ಗುರುರಾಜ್ ಹೆಚ್.ಎಲ್, ಡಾ. ಗೋಪಾಲಕೃಷ್ಣ ಎಂ.ಟಿ, ಡಾ. ಕವ್ಯಶ್ರೀ ಎಂ.ಎನ್, ಕೆ.ಎಸ್. ಕೀರ್ತಿ, ಮಧು ಮತ್ತಿತರರು ಭಾಗವಹಿಸಿದರು.










