ಹಾಸನದಲ್ಲಿ ಮೂವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಾಪತ್ತೆ: ಶಾಲೆಗೆಂದು ಹೋದ ಬಾಲಕರಿಗಾಗಿ ಪೊಲೀಸರ ಹುಡುಕಾಟ

ಮೈಸೂರು ರೈಲು ನಿಲ್ದಾಣದಿಂದ ತಾಯಿಗೆ ಕರೆ ಮಾಡಿದ ವಿದ್ಯಾರ್ಥಿ; ಪೋಷಕರಲ್ಲಿ ಹೆಚ್ಚಿದ ಆತಂಕ

ಹಾಸನ ಜಿಲ್ಲೆಯ ಮೂವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶಾಲೆಗೆಂದು ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಮೈಸೂರು ರೈಲು ನಿಲ್ದಾಣದಿಂದ ತಾಯಿಗೆ ಕರೆ ಮಾಡಿದ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಹಾಸನ,ಜೂನ್ 10,(www.kannadapost.com): ಶಾಲೆಗೆಂದು ಮನೆಯಿಂದ ಹೊರಟಿದ್ದ ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.

ಹಾಸನ ತಾಲೂಕಿನ ಸೌದ್ರಳ್ಳಿ ಗ್ರಾಮದ ಪ್ರಸನ್ನ, ದೊಡ್ಡಬಸವನಹಳ್ಳಿ ಗ್ರಾಮದ ಅಮೃತ್ ಹಾಗೂ ಕಿತ್ತಾನೆಗಡಿಯ ಮೋಹನ್ ನಾಪತ್ತೆಯಾಗಿರುವ ವಿದ್ಯಾರ್ಥಿಗಳಾಗಿದ್ದಾರೆ. ಇವರು ಜ್ಞಾನ ಗುರುಕುಲ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರ ಬೆಳಿಗ್ಗೆ ಶಾಲೆಗೆ ತೆರಳಿದ ಬಳಿಕ ಮನೆಗೆ ಮರಳಿಲ್ಲ.

ಲಭ್ಯ ಮಾಹಿತಿಯ ಪ್ರಕಾರ, ಸೋಮವಾರ ಸಂಜೆ ಮೋಹನ್ ಮೈಸೂರು ರೈಲು ನಿಲ್ದಾಣದಲ್ಲಿ ಇದ್ದ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ತನ್ನ ತಾಯಿಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಅದರ ಬಳಿಕ ಮೂವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಗೊರೂರು ಪೊಲೀಸ್ ಠಾಣೆಯಲ್ಲಿ ಒಂದು ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿದ್ಯಾರ್ಥಿಗಳ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಮಕ್ಕಳು ನಾಪತ್ತೆಯಾಗಿರುವುದರಿಂದ ಕುಟುಂಬಸ್ಥರು ಮತ್ತು ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಶೀಘ್ರದಲ್ಲೇ ಮಕ್ಕಳು ಸುರಕ್ಷಿತವಾಗಿ ಮರಳಲಿ ಎಂದು ಆಶಿಸುತ್ತಿದ್ದಾರೆ.