ರಾಯಚೂರು : ಸಿಂಧನೂರು ಬಳಿ ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾ*

ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಲಾರಿ ಹಾಗೂ ಎರಡು ಪಿಕ್‌ಅಪ್ (ಬೊಲೆರೋ) ವಾಹನಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರು ಆಂಧ್ರಪ್ರದೇಶದ ಚಲ್ಲೆಕೂಡ್ಲೂರು ಗ್ರಾಮದವರು ಎಂದು ಗುರುತಿಸಲಾಗಿದ್ದು, ಯಲ್ಲಪ್ಪ (44), ಹರಿ (24), ರಂಗನಾಥ (12), ಬಸವರಾಜ (37) ಸೇರಿದಂತೆ ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದೆ.

ಮೃತರು ಬಾಗಲಕೋಟೆ ಜಿಲ್ಲೆಯ ಕುರಿ ಸಂತೆಯಲ್ಲಿ ಕುರಿಗಳನ್ನು ಖರೀದಿಸಿ, ಎರಡು ಪಿಕ್‌ಅಪ್ ವಾಹನಗಳಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು. ಸಿಂಧನೂರಿನಿಂದ ಬಳ್ಳಾರಿ ಕಡೆಗೆ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಎರಡೂ ಪಿಕ್‌ಅಪ್ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಹಲವು ಕುರಿಗಳೂ ಸಾವನ್ನಪ್ಪಿವೆ. ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದವರಲ್ಲಿ ಐವರು ಜೀವ ಕಳೆದುಕೊಂಡಿದ್ದಾರೆ.