ಬೆಂಗಳೂರು: ಆರೋಪಿಯ ಮೊಬೈಲ್ ನೋಡಿದ ಪೊಲೀಸರೇ ಶಾಕ್-ಮಹಿಳೆಯರ ಒಳಉಡುಪುಗಳನ್ನು ಕಳ್ಳತನ ಮಾಡಿದ ನಂತರ ಏನ್ ಮಾಡ್ತಿದ್ದ ಗೊತ್ತಾ..?

ಬೆಂಗಳೂರು: ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಮಹಿಳೆಯರ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಮಲ್ ಎಂದು ಗುರುತಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿಯ ವಿವಿಧ ಮನೆಗಳ ಬಳಿ ಒಣಗಿಸಲು ಹಾಕಿದ್ದ ಮಹಿಳೆಯರ ಒಳಉಡುಪುಗಳನ್ನು ಆತ ಕದ್ದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

ಸ್ಥಳೀಯ ಮಹಿಳೆಯರು ಒಳಉಡುಪುಗಳು ನಿರಂತರವಾಗಿ ಕಣ್ಮರೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿದ ಪೊಲೀಸರು, ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ವೇಳೆ ಅಮಲ್ ಕದ್ದ ಒಳಉಡುಪುಗಳನ್ನು ತಾನೇ ಧರಿಸುತ್ತಿದ್ದನು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬಂಧನದ ಬಳಿಕ ಆರೋಪಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಪರಿಶೀಲನೆ ವೇಳೆ ಮಹಿಳೆಯರ ಒಳಉಡುಪುಗಳಿಗೆ ಸಂಬಂಧಿಸಿದ ಹಲವು ಫೋಟೋಗಳು ಪತ್ತೆಯಾಗಿದ್ದು, ಇದನ್ನು ಕಂಡು ಪೊಲೀಸರು ಕ್ಷಣಕಾಲ ಅಚ್ಚರಿಗೊಳಗಾಗಿದ್ದಾರೆ. ಅಲ್ಲದೇ, ಆರೋಪಿಯು ವಾಸವಾಗಿದ್ದ ಮನೆಯಲ್ಲಿಯೂ ವಿವಿಧ ಮಹಿಳೆಯರ ಒಳಉಡುಪುಗಳು ಪತ್ತೆಯಾಗಿವೆ.

ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆತ ಈ ಕೃತ್ಯಕ್ಕೆ ಏಕೆ ಮುಂದಾಗಿದ್ದ, ಇನ್ನೂ ಎಷ್ಟು ಮನೆಗಳಲ್ಲಿ ಕಳ್ಳತನ ನಡೆಸಿದ್ದ ಎಂಬ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.