ಇತಿಹಾಸ ಪ್ರಸಿದ್ಧ ಮಾಡಾಳು ಶ್ರೀ ಸ್ವರ್ಣ ಗೌರಮ್ಮ ದೇವಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ; ಕೋಡಿಮಠದ ಶ್ರೀ ಚೇತನ್ ಮರಿದೇವರು ಭೇಟಿ

ಹಾಸನ (kannadapost.com): ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯ ದರ್ಶನ ಪಡೆಯಲು ನಾಡಿನ ಮೂಲೆ ಮೂಲೆಗಳಿಂದ ಭಕ್ತಸಾಗರವೇ ಹರಿದುಬರುತ್ತಿದೆ. ಹಗಲಿರುಳೆನ್ನದೆ ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ.

​ಭಾದ್ರಪದ ಮಾಸದ ತದಿಗೆಯಂದು ಮೂಲ ಶ್ರೀ ಸ್ವರ್ಣಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ದಂಡು ಹರಿದುಬರುತ್ತಿದೆ. ಗುರುವಾರ ತಡರಾತ್ರಿ 1 ಗಂಟೆಯವರೆಗೂ ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದರು.

ಕೋಡಿಮಠದ ಶ್ರೀ ಚೇತನ್ ಮರಿದೇವರು ಭೇಟಿ:

ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿಗಳಾದ ಶ್ರೀ ಚೇತನ್ ಮರಿದೇವರು ಸಂಜೆ 8 ಗಂಟೆಗೆ ದೇವಾಲಯಕ್ಕೆ ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, “ನಾಡಿನ ನಾನಾ ಭಾಗಗಳಿಂದ ಅಮ್ಮನವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿ ಅನಾನುಕೂಲ ಹಾಗೂ ತೊಂದರೆಯಾಗದಂತೆ ಸುಗಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಜೊತೆಗೆ ಆಗಮಿಸುವ ಎಲ್ಲಾ ಭಕ್ತರಿಗೂ ಸಮರ್ಪಕವಾಗಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಬೇಕು,” ಎಂದು ದೇವಾಲಯದ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಂಗಾರದ ಮೂಗುತಿ ಮತ್ತು ನೂತನ ಶಿಲಾ ದೇವಾಲಯದ ಇತಿಹಾಸ:

ಇದೇ ವೇಳೆ ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಸ್ವಾಮೀಜಿ, “ಕೋಡಿಮಠದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿ ಅವರು ಒಂದು ಕೋಟಿ ಜಪ ಮಾಡಿ, ಗೌರಮ್ಮ ದೇವಿಗೆ ಬಂಗಾರದ ಮೂಗುತಿಯನ್ನು ಆಶೀರ್ವದಿಸಿ, ಮಾಡಾಳು ಗ್ರಾಮದ ತಮ್ಮ ಪರಮ ಭಕ್ತರಾದ ಮುದ್ದೇಗೌಡರಿಗೆ ಕರುಣಿಸಿದ್ದರು. ಇದೀಗ ನಮ್ಮ ಪೂಜ್ಯರು ಮೂಲ ಗೌರಮ್ಮ ದೇವಿಗೆ 1.5 ಕೋಟಿ ರೂ. (150 ಲಕ್ಷ) ವೆಚ್ಚದಲ್ಲಿ ನೂತನವಾದ ಶಿಲಾ ದೇವಾಲಯವನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಪುಣ್ಯಕ್ಷೇತ್ರವು ಮುಂದಿನ ದಿನಗಳಲ್ಲಿ ರಾಜ್ಯದ ಮತ್ತೊಂದು ‘ಶಕ್ತಿಪೀಠ’ವಾಗಿ ಬೆಳೆದು, ನಂಬಿ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

​ಈ ಶುಭ ಸಂದರ್ಭದಲ್ಲಿ ಐನಳ್ಳಿ ಪ್ರಶಾಂತ್ ದೇವ್ರು ಹಾಗೂ ಕೋಡಿ ಮಠದ ಏಜೆಂಟ್ ಹೆಚ್.ಸಿ. ಮಹದೇವಪ್ಪ ಸೇರಿದಂತೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.