23 C
Munich
Home News ಹೊಳೆನರಸೀಪುರ: ರಸ್ತೆಯಲ್ಲಿ ಸಿಕ್ಕ ₹60 ಸಾವಿರ ಮೌಲ್ಯದ ಚಿನ್ನದ ತಾಳಿಯನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸ್ ಕಾನ್ಸ್‌ಟೇಬಲ್...

ಹೊಳೆನರಸೀಪುರ: ರಸ್ತೆಯಲ್ಲಿ ಸಿಕ್ಕ ₹60 ಸಾವಿರ ಮೌಲ್ಯದ ಚಿನ್ನದ ತಾಳಿಯನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸ್ ಕಾನ್ಸ್‌ಟೇಬಲ್ ರೂಪೇಶ್

ಹಾಸನ (www.kannadapost.com): ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆಯಾಗಿ, ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ರೂಪೇಶ್ ಅವರು ರಸ್ತೆಯಲ್ಲಿ ಸಿಕ್ಕ ಸುಮಾರು ₹60 ಸಾವಿರ ಮೌಲ್ಯದ ನಾಲ್ಕು ಗ್ರಾಂ ಚಿನ್ನದ ತಾಳಿಯನ್ನು ಅದರ ನಿಜವಾದ ವಾರಸುದಾರರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಹಣ್ಣು ಖರೀದಿಸುವಾಗ ಬಿದ್ದಿದ್ದ ಚಿನ್ನದ ತಾಳಿ

ತುಮಕೂರು ಜಿಲ್ಲೆಯ ತುರುವೇಕೆರೆಯಿಂದ ಮಾದೀಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಅಭಿಲಾಷ್ ಹಾಗೂ ಲಕ್ಷ್ಮೀ ದಂಪತಿ, ಹೊಳೆನರಸೀಪುರದಲ್ಲಿ ಹಣ್ಣು ಖರೀದಿಸುವ ವೇಳೆ ಲಕ್ಷ್ಮೀ ಅವರ ಕುತ್ತಿಗೆಯಲ್ಲಿದ್ದ ಸುಮಾರು ನಾಲ್ಕು ಗ್ರಾಂ ತೂಕದ ಚಿನ್ನದ ತಾಳಿ ತಿಳಿಯದೆ ತುಂಡಾಗಿ ರಸ್ತೆಗೆ ಬಿದ್ದಿತ್ತು.

ಮನೆಗೆ ತೆರಳಿದ ಬಳಿಕ ತಾಳಿ ಕಾಣಿಸದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ದಂಪತಿ ತಕ್ಷಣವೇ ಹಣ್ಣು ಖರೀದಿಸಿದ್ದ ಸ್ಥಳಕ್ಕೆ ಮರಳಿ ಬಂದು ಹುಡುಕಾಟ ನಡೆಸಿದರು. ಆದರೆ ಸಾಕಷ್ಟು ಹುಡುಕಿದರೂ ತಾಳಿ ಪತ್ತೆಯಾಗದೆ ನಿರಾಸೆಯಿಂದ ಮರಳುವ ಪರಿಸ್ಥಿತಿ ಎದುರಾಯಿತು.

ಪ್ರಾಮಾಣಿಕತೆ ಮೆರೆದ ಕಾನ್ಸ್‌ಟೇಬಲ್ ರೂಪೇಶ್

ಅದೇ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ತಾಳಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರೂಪೇಶ್ ಅವರಿಗೆ ಸಿಕ್ಕಿತ್ತು. ಬಳಿಕ ದಂಪತಿ ತಾಳಿ ಹುಡುಕುತ್ತಿರುವ ಮಾಹಿತಿ ತಿಳಿದು, ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡರು.

ದಂಪತಿ ನೀಡಿದ ಮಾಹಿತಿ ಹಾಗೂ ಗುರುತಿನ ಆಧಾರದ ಮೇಲೆ ಸುಮಾರು ₹60 ಸಾವಿರ ಮೌಲ್ಯದ ಚಿನ್ನದ ತಾಳಿಯನ್ನು ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಿದರು.

ಪೊಲೀಸರ ಸೇವೆಗೆ ಮೆಚ್ಚುಗೆ

ಕಳೆದುಹೋಗಿದ್ದ ಚಿನ್ನದ ತಾಳಿ ಮರಳಿ ಸಿಕ್ಕಿದ್ದರಿಂದ ಅಭಿಲಾಷ್ ಮತ್ತು ಲಕ್ಷ್ಮೀ ದಂಪತಿ ಸಂತಸ ವ್ಯಕ್ತಪಡಿಸಿ, ಪೊಲೀಸ್ ಕಾನ್ಸ್‌ಟೇಬಲ್ ರೂಪೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.

ರೂಪೇಶ್ ಅವರ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಹಾಸನ ಜಿಲ್ಲಾ ಪೊಲೀಸರ ಸೇವಾ ಮನೋಭಾವಕ್ಕೆ ಈ ಘಟನೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.

error: Content is protected !!