ಹಾಸನ: ಡಯಾಲಿಸಿಸ್‌ ಆಗುತ್ತಿರುವುದು ಕಿಡ್ನಿಗೆ ಹೊರತು ಮೆದುಳಿಗಲ್ಲ; ‘ನೈಸ್’ ನನ್ನ ಕೂಸಾದರೆ ಸೂಲಗಿತ್ತಿ ಯಾರು? – ಎಚ್.ಡಿ.ದೇವೇಗೌಡ

ಹಾಸನ (kannadapost.com): “ನನ್ನ ಕಿಡ್ನಿಗೆ ಡಯಾಲಿಸಿಸ್‌ ಮಾಡಿಸುತ್ತಿದ್ದೇನೆ ಹೊರತು ಮೆದುಳಿಗೆ ಅಲ್ಲ. ನನಗೆ 93 ವರ್ಷವಾದರೂ ಇನ್ನೂ ಹೋರಾಡುವ ಶಕ್ತಿಯಿದೆ. ಪಿತೃಪಕ್ಷ ಮುಗಿದ ಬಳಿಕ ಹಾಸನ ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ,” ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗುಡುಗಿದ್ದಾರೆ.

​ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣ, ನೈಸ್ ಯೋಜನೆ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

​‘ನೈಸ್‌’ ನನ್ನ ಕೂಸಾದರೆ ಸೂಲಗಿತ್ತಿ ಯಾರು?

ನೈಸ್ ಅಕ್ರಮದ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡರು, “ನೈಸ್‌ ಯೋಜನೆ ದೇವೇಗೌಡರ ಕೂಸು ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಾಗಾದರೆ ಆ ಕೂಸಿಗೆ ಸೂಲಗಿತ್ತಿ ಯಾರು ಎಂಬುದನ್ನೂ ಅವರೇ ಹೇಳಬೇಕಲ್ಲವೇ? ಇದನ್ನು ಜನರೇ ತೀರ್ಮಾನಿಸಬೇಕು,” ಎಂದು ಹಾಸ್ಯ ಚಟಾಕಿ ಹಾರಿಸಿದರು.

​”1995ರಲ್ಲಿ ಡಾ. ಮನಮೋಹನ್‌ ಸಿಂಗ್‌ ಜಾರಿಗೊಳಿಸಿದ ಆರ್ಥಿಕ ಕೈಗಾರಿಕಾ ನೀತಿಯಿಂದ ಈ ಯೋಜನೆ ಅಸ್ತಿತ್ವ ಪಡೆಯಿತು. ಅಮೆರಿಕದ ಎರಡು ಹಾಗೂ ಭಾರತದ ಒಂದು ಕಂಪನಿ ರಸ್ತೆ ಕೆಲಸ ವಹಿಸಿಕೊಂಡವು. ನಾನು ಕೇವಲ ಒಪ್ಪಂದಕ್ಕೆ (MoU) ಸಹಿ ಹಾಕಿದ್ದೆ. ಆ ಬಳಿಕ ದೆಹಲಿಗೆ ತೆರಳಿದಾಗ ಇಲ್ಲಿ ಏನೇನಾಯ್ತು ಎಂದು ನನಗೆ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದಿದೆ. ಇಷ್ಟಾದ ಮೇಲೆ ನಾನು ಮಾತನಾಡುವುದು ಏನಿದೆ? ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ದೇವೇಗೌಡರ ಸಾಧನೆ ಏನೆಂಬುದನ್ನು ಇತಿಹಾಸ ಹೇಳುತ್ತದೆ,” ಎಂದು ತಿರುಗೇಟು ನೀಡಿದರು.

​ಸಿದ್ದರಾಮಯ್ಯ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾತನಾಡಿದ ಅವರು, “ಮಾತು ಮಾತಿಗೆ ತಾವು ದೀಪದ ಬೆಳಕಲ್ಲಿ ಓದಿದ್ದೀನಿ ಅಂತಾರೆ. ಹಾಗಾದರೆ ನಮ್ಮ ಊರಿಗೆ ವಿದ್ಯುತ್‌ ಸಂಪರ್ಕ ಬಂದಿತ್ತಾ? ನಾನು ಯಾವ ಬೆಳಕಿನಲ್ಲಿ ಓದಿದ್ದೇನೆ? ಸುಲಭವಾಗಿ ಇಂದಿನ ಯುವಕರನ್ನು ಯಾಮಾರಿಸಲು ಆಗುವುದಿಲ್ಲ,” ಎಂದು ಲೇವಡಿ ಮಾಡಿದರು.

​ರಾಹುಲ್ ಗಾಂಧಿ ಕುರಿತು ಪ್ರತಿಕ್ರಿಯಿಸುತ್ತಾ, “ರಾಹುಲ್‌ ಗಾಂಧಿಗೆ ಅನುಭವದ ಕೊರತೆ ಎಂದು ಹೇಳುವುದಿಲ್ಲ. ಅವರು ಯುವಕರಿದ್ದಾರೆ, ವೇಗವಾಗಿ ಬೆಳೆಯಬೇಕೆಂಬ ಹಂಬಲದಿಂದ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಂಸತ್ ಕಲಾಪ ಗದ್ದಲದಲ್ಲಿ ಕಳೆದಾಗ ನಾನು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಕೋರಿದ್ದೆ. ಅವರು ಸಮ್ಮತಿಸಿ ಸಹಕರಿಸಿದ್ದಲ್ಲದೆ, ನನ್ನ ಆರೋಗ್ಯದ ಕುರಿತು ಕಾಳಜಿ ತೋರಿದರು. ಇಂತಹ ಮನೋಭಾವ ರಾಜಕಾರಣಿಗಳಿಗೆ ಅತಿಮುಖ್ಯ,” ಎಂದರು.

​ಸಂಸತ್ ಭಾಷಣಗಳ 2 ಪುಸ್ತಕ ಬಿಡುಗಡೆ:

“ನನ್ನ ಇಡೀ ರಾಜಕೀಯ ಹೋರಾಟವನ್ನು ರೈತರಿಗಾಗಿಯೇ ಮಾಡಿದ್ದೇನೆ. 1991 ರಿಂದ 2026ರ ವರೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಾನು ಮಾಡಿದ ಭಾಷಣಗಳನ್ನು ಸಂಗ್ರಹಿಸಿ ‘ನೇಗಿಲ ಗೆರೆಗಳು’ ಹಾಗೂ ‘ಫೋರ್ಸ್‌ ಇನ್‌ ದಿ ಫೀಲ್ಡ್‌’ (Force in the Field) ಹೆಸರಿನ ಎರಡು ಪುಸ್ತಕಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ದೇಶದ ಯುವಕರು ಆ ಪುಸ್ತಕಗಳನ್ನು ಓದಿ, ನನ್ನ ಹೋರಾಟದ ಹಾದಿಯನ್ನು ಅರಿಯಬೇಕು,” ಎಂದು ಆಶಿಸಿದರು.

​ಹರದನಹಳ್ಳಿಯಲ್ಲಿ ಈ ಬಾರಿ ಪಿತೃಪಕ್ಷ:

“ಇಷ್ಟು ವರ್ಷಗಳಿಂದ ಬೆಂಗಳೂರಿನಲ್ಲೇ ಪಿತೃಪಕ್ಷ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಹರದನಹಳ್ಳಿಯಲ್ಲೇ ಪಿತೃಪಕ್ಷ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಜೀವಿತದ ಕೊನೆಯವರೆಗೂ ಜಿಲ್ಲೆಯ ಜನರ ಋಣ ತೀರಿಸಲು ಪ್ರಯತ್ನಿಸುತ್ತೇನೆ. ಪಿತೃಪಕ್ಷದ ಬಳಿಕ ಮತ್ತೆ ಮಾಧ್ಯಮಗಳನ್ನು ಭೇಟಿಯಾಗಿ ವಿಸ್ತಾರವಾಗಿ ಮಾತನಾಡುತ್ತೇನೆ,” ಎಂದು ಭರವಸೆ ನೀಡಿದರು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಜೆಡಿಎಸ್‌ ಮತ್ತು ಬಿಜೆಪಿ ಒಟ್ಟಾಗಿ ಎದುರಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.