“ಆಡಳಿತ ನಡೆಸಲು ಕನಿಷ್ಠ ಜ್ಞಾನ ಬೇಡವೇ?” ಹಾಸನ ಡಿಸಿ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ!

ಹಾಸನ (kannadapost.com): ಜಿಲ್ಲಾಡಳಿತದಲ್ಲಿ ಜಿಲ್ಲಾಧಿಕಾರಿ (DC) ಹಾಗೂ ಪೊಲೀಸ್ ವರಿಷ್ಠಾಧಿಕಾರಿ (SP) ನಡುವಿನ ಸಮನ್ವಯದ ಕೊರತೆ ಮತ್ತು ಗಣೇಶ ವಿಸರ್ಜನೆ ವೇಳೆ ಉಂಟಾದ ವಿವಾದದ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಯವರ ನಡೆಗೆ ಗರಂ ಆಗಿರುವ ಅವರು, “ಅಧಿಕಾರ ನಡೆಸಲು ಒಂದು ಸಣ್ಣ ಜ್ಞಾನ ಬೇಡವೇ? ಹೀಗೆ ಹಗುರವಾಗಿ ತೆಗೆದುಕೊಂಡರೆ ಜಿಲ್ಲಾಡಳಿತವೇ ಕುಸಿದುಬೀಳುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

 ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳ ಉದ್ದಟತನದ ವರ್ತನೆಯಿಂದ ಆಡಳಿತ ವ್ಯವಸ್ಥೆ ಹದಗೆಡುತ್ತಿದೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

​“ಎಸ್ಪಿಗೆ ನೋಟಿಸ್ ನೀಡಲು ಇವರದ್ದೇನು ಉದ್ದಟತನ?”

​”ವರ್ಷಗಳಿಂದ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿರುವ ಗಣೇಶ ವಿಸರ್ಜನೆ ವಿಚಾರದಲ್ಲಿ ಈ ಬಾರಿ ಬೀಗ ಹಾಕಿ ಸಂಘರ್ಷ ಸೃಷ್ಟಿಸುವ ಅಗತ್ಯವೇನಿತ್ತು? ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಐಪಿಎಸ್ ಪಾಸ್ ಮಾಡಿಕೊಂಡೇ ಜವಾಬ್ದಾರಿಯುತ ಹುದ್ದೆಗೆ ಬಂದಿರುತ್ತಾರೆ. ಅಂತಹ ಎಸ್ಪಿಗೆ ಡಿಸಿ ನೋಟಿಸ್ ನೀಡುತ್ತಾರೆ ಎಂದರೆ ಏನರ್ಥ? ಎಸ್ಪಿಗೆ ಜವಾಬ್ದಾರಿ ಇಲ್ವಾ? ಇವರ ಏನೇನು ಬಂಡವಾಳ ಇದೆ ಎಂದು ತೆಗೆಯಬೇಕಾ? ಡಿಸಿ ಮತ್ತು ಎಸ್ಪಿ ನಡುವೆಯೇ ಸಂಘರ್ಷ ಉಂಟಾದರೆ ಈ ಜಿಲ್ಲೆಯಲ್ಲಿ ಆಡಳಿತ ಹೇಗೆ ನಡೆಸುತ್ತೀರಿ?” ಎಂದು ಪ್ರಶ್ನಿಸಿದರು.

​ಕೆಪಿಎಸ್‌ಸಿ ವಿವಾದ ಪ್ರಸ್ತಾಪಿಸಿದ ಹೆಚ್‌ಡಿಕೆ:

​ಜಿಲ್ಲಾಧಿಕಾರಿಗಳ ಹಿಂದಿನ ಹುದ್ದೆಯ ಕಾರ್ಯವೈಖರಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, “ಕೆಪಿಎಸ್‌ಸಿಯಲ್ಲಿದ್ದಾಗ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಆಗಲೇ ರಜೆ ಮೇಲೆ ಕಳಿಸಿ ಅಮಾನತು (Suspend) ಮಾಡಬೇಕಿತ್ತು. ಆದರೆ ಅವರನ್ನು ಸಸ್ಪೆಂಡ್ ಮಾಡದೇ ರಕ್ಷಣೆ ಕೊಟ್ಟು ಇಲ್ಲಿಗೆ ತಂದು ಕೂರಿಸಿದ್ದಾರೆ. ಅಧಿಕಾರಿಗಳು ತಮ್ಮ ಇತಿಮಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಅವರಿಗೆ ಪ್ರತ್ಯೇಕವಾಗಿ ನಾವೇನು ಪಾಠ ಮಾಡಬೇಕಿಲ್ಲ, ಈಗಾಗಲೇ ತರಬೇತಿ ಪಡೆದಿರುತ್ತಾರೆ” ಎಂದರು.

​ಜನಸಾಮಾನ್ಯರ ಕಷ್ಟ ನಿಭಾಯಿಸುವುದು ಹೇಗೆ?:

​”ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಸಾಮಾನ್ಯ ಜನರ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತೀರಿ? ಇಂತಹ ಸೂಕ್ಷ್ಮ ವಿಚಾರಗಳನ್ನು ಹುಡುಗಾಟಿಕೆಯಾಗಿ ತೆಗೆದುಕೊಂಡರೆ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತದೆ. ಅಧಿಕಾರಿಗಳು ಸಾರ್ವಜನಿಕವಾಗಿ ಸಂಘರ್ಷ ಮಾಡುವುದನ್ನು ಬಿಟ್ಟು ಜನರ ಹಿತದೃಷ್ಟಿಯಿಂದ ಕೆಲಸ ಮಾಡಲಿ” ಎಂದು ಹೆಚ್‌ಡಿಕೆ ಕಿವಿಮಾತು ಹೇಳಿದರು.

​ಸಿಎಂ ಕಚೇರಿ ಸ್ಟಿಂಗ್ ಆಪರೇಷನ್ ಬಗ್ಗೆ ಲೇವಡಿ:

​ಇದೇ ವೇಳೆ ಸಿಎಂ ಕಚೇರಿ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, “ಮುಖ್ಯಮಂತ್ರಿಗಳ ಮನೆ ಮತ್ತು ಕಚೇರಿಗೆ ಬಂದು ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು ಎಂದು ಗೊತ್ತಾದ ಮೇಲೂ ಅವರನ್ನು ಅರೆಸ್ಟ್ ಮಾಡದೆ ಏಕೆ ಬಿಟ್ಟರು? ಕೇವಲ ಐದೇ ಜನ ಎಂದು ಹೇಳಿದ್ದೇಕೆ? ಇದು ಒಂದು ರೀತಿಯ ನಗೆಪಾಟಲಿನ ಸಂಗತಿ” ಎಂದು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.