ಹಾಸನ (kannadapost.com): ನೈಸ್ (NICE) ರಸ್ತೆ ಯೋಜನೆಯ ಅಕ್ರಮದ ವಿಚಾರವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರ (ಕೆ.ಎನ್. ಶಿವಲಿಂಗೇಗೌಡ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಚನೆಯಾಗಿದ್ದ ನೈಸ್ ವಿರುದ್ಧದ ಸದನ ಸಮಿತಿಯಲ್ಲಿ ಉಸ್ತುವಾರಿ ಸಚಿವರ ಪಾತ್ರವನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ.
‘ನಾನೇ ಬುದ್ಧಿವಂತ ಎಂದು ಸಮಿತಿಗೆ ಸೇರಿದ್ದರು’:
“ಈಗಿನ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಆಗ ನಮ್ಮ ಪಕ್ಷದಿಂದಲೇ (ಜೆಡಿಎಸ್) ಸದನ ಸಮಿತಿ ಸದಸ್ಯರಾಗಿದ್ದರು. ನೈಸ್ ವಿರುದ್ಧ ವರದಿ ನೀಡಲು ನೇಮಕವಾಗಿದ್ದ ಆ ಸಮಿತಿಗೆ, ‘ನಮ್ಮ ಪಕ್ಷದಲ್ಲಿ ಯಾರೂ ಬುದ್ಧಿವಂತರಿಲ್ಲ, ನಾನೇ ಬುದ್ಧಿವಂತ’ ಎಂದು ಹೇಳಿಕೊಂಡು ತಾವೇ ಸೇರಿಕೊಂಡಿದ್ದರು,” ಎಂದು ರೇವಣ್ಣ ಲೇವಡಿ ಮಾಡಿದರು.
‘ಕುಮಾರಣ್ಣನಿಗೆ ಹೇಳಿ ಸದಸ್ಯರಾಗಿದ್ದರು’:
“ಅಲ್ಲಿ ನಡೆದಿರುವ ಅವ್ಯವಹಾರವನ್ನು ಯಾರಿಗೂ ಹೇಳೋದಕ್ಕೆ ಬರೋದಿಲ್ಲ. ‘ನಮ್ಮ ಪಾರ್ಟಿಯಿಂದ ನಾನೇ ಸೇರಿಕೊಳ್ಳುತ್ತೇನೆ’ ಎಂದು ಒತ್ತಡ ಹಾಕಿದ್ದರು. ‘ಯಾರ್ಯಾರು ದುಡ್ಡು ಹೊಡೆದಿದ್ದಾರೆ, ಲೂಟಿ ಮಾಡಿಬಿಟ್ಟಿದ್ದಾರೆ’ ಎಂದು ಕುಮಾರಣ್ಣನಿಗೆ (ಹೆಚ್.ಡಿ. ಕುಮಾರಸ್ವಾಮಿ) ಹೇಳಿ ಸಮಿತಿಯ ಸದಸ್ಯರಾಗಿದ್ದರು. ಈಗ ಅವರು ಸದಸ್ಯರಾಗಿ ಏನು ಬರೆಸಿಕೊಂಡು ಬಂದಿದ್ದಾರೋ, ಆ ವಿಷಯವನ್ನು ಮೊದಲು ಸಾರ್ವಜನಿಕರಿಗೆ ತಿಳಿಸಲಿ. ಆ ಬಗ್ಗೆ ಅವರು ಸ್ಪಷ್ಟಪಡಿಸಬೇಕು,” ಎಂದು ಆಗ್ರಹಿಸಿದರು.
ಜೇನುಕಲ್ ಸಿದ್ದೇಶ್ವರನ ಮುಂದೆ ಹೇಳಲಿ:
ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ರೇವಣ್ಣ, “ನೈಸ್ ಯೋಜನೆಯನ್ನು ದೇವೇಗೌಡರ ಕೂಸು ಅಂದನಲ್ಲಾ, ಹಾಗಾದರೆ ಇವನ್ಯಾಕೆ ಅಲ್ಲಿಗೆ ಹೋಗಿದ್ದ ವರದಿ ಕೊಡೋದಕ್ಕೆ?” ಎಂದು ಏಕವಚನದಲ್ಲೇ ಪ್ರಶ್ನಿಸಿದರು. ಅಲ್ಲದೆ, “ಧೈರ್ಯವಿದ್ದರೆ ಈ ವಿಚಾರವಾಗಿ ಜೇನುಕಲ್ ಸಿದ್ದೇಶ್ವರ ಬೆಟ್ಟದ ಮುಂದೆ ನಿಂತು ಸತ್ಯ ಹೇಳಲಿ,” ಎಂದು ಉಸ್ತುವಾರಿ ಸಚಿವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.












