ಸಚಿವ ಶಿವಲಿಂಗೇಗೌಡರಿಗೆ ಎ.ಮಂಜು ಸಲಹೆ: ‘ಮೊಂಡತನ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿ’

  • ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರಿಗೆ ಮಾಜಿ ಸಚಿವ ಎ.ಮಂಜು ಸಲಹೆ ನೀಡಿದ್ದು, ಜಿಲ್ಲೆಯ ಅಭಿವೃದ್ಧಿ, ರೈತರಿಗೆ ಸಾಲಮನ್ನಾ ಹಾಗೂ ಕೆಪಿಎಸ್‌ಸಿ ನೇಮಕಾತಿ ಕುರಿತು ಸರ್ಕಾರವನ್ನು ಟೀಕಿಸಿದ್ದಾರೆ.

ಹಾಸನ,ಆ. 4 | ಕನ್ನಡಪೋಸ್ಟ್‌ ನ್ಯೂಸ್ ನೆಟ್ವರ್ಕ್

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎ.ಮಂಜು ಪ್ರತಿಕ್ರಿಯೆ ನೀಡಿ, ವೈಯಕ್ತಿಕ ಟೀಕೆಗಳನ್ನು ಬದಿಗೊತ್ತಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ದೊರೆತಿರುವುದು ಉತ್ತಮ ಬೆಳವಣಿಗೆ. ಈಗ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿ ಉತ್ತಮ ಹೆಸರು ಗಳಿಸಬೇಕು ಎಂದು ಹೇಳಿದರು.

“ಹಿಂದೆ ಕೆಲಸ ಮಾಡಲು ಅವಕಾಶ ಕೊಡಲಿಲ್ಲ ಎಂದು ನಮ್ಮ ಪಕ್ಷದವರನ್ನೇ ಟೀಕಿಸುತ್ತಿದ್ದರು. ಈಗ ಸಚಿವ ಸ್ಥಾನ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿ ಒಳ್ಳೆಯ ಹೆಸರು ತಂದುಕೊಳ್ಳಲಿ. ನಮ್ಮ ಸಹಕಾರವೂ ಇರುತ್ತದೆ. ನಮ್ಮನ್ನು ಉಪಯೋಗಿಸಿಕೊಳ್ಳಬೇಕು,”

-ಎ. ಮಂಜು, ಮಾಜಿ ಸಚಿವ

ಅವರು, “ಮಂತ್ರಿ ಆದ ಮೇಲೆ ಕೇವಲ ಅರಸೀಕೆರೆ ಕ್ಷೇತ್ರವನ್ನಷ್ಟೇ ನೋಡದೆ, ಇಡೀ ಹಾಸನ ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಮೊಂಡತನದಲ್ಲಿ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು,” ಎಂದು ಸಲಹೆ ನೀಡಿದರು.

ಬರಪರಿಹಾರ, ಸಾಲಮನ್ನಾಗೆ ಆಗ್ರಹ

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಪರವಾಗಿದ್ದರೆ ತಕ್ಷಣ ನೆರವಿಗೆ ಬರಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಅಥವಾ ಸಾಲಮನ್ನಾ ಘೋಷಿಸಬೇಕು ಎಂದು ಎ. ಮಂಜು ಒತ್ತಾಯಿಸಿದರು.

“ಕಳೆದ ಬಾರಿ ಬೆಳೆ ವಿಮೆ ಹಣವನ್ನೇ ನೀಡಿಲ್ಲ. ಈ ಬಾರಿ ರೈತರಿಗೆ ಹೇಗೆ ನೆರವು ನೀಡುತ್ತಾರೆ? ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ರೈತರಿಗಾಗಿ ಸಾಲ ಮಾಡಿ ಆದರೂ ಪರಿಹಾರ ನೀಡಬೇಕು,” ಎಂದು ಹೇಳಿದರು.

ಕಾಂಗ್ರೆಸ್ ಬಂಡಾಯ ಕುರಿತು ಪ್ರತಿಕ್ರಿಯೆ

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಸಮಾಧಾನ ಮತ್ತು ಬಂಡಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಆಡಳಿತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ವಿಧಾನಸಭೆ ಅಧಿವೇಶನ ಮುಗಿಯಲಿ, ಮುಂದೆ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ. ಅವರ ಶಾಸಕರು ರಾಜೀನಾಮೆ ಕೊಟ್ಟರೆ ನಮಗೇನು?” ಎಂದು ಪ್ರತಿಕ್ರಿಯಿಸಿದರು.

ಕೆಪಿಎಸ್‌ಸಿ ನೇಮಕಾತಿ ಬಗ್ಗೆ ಟೀಕೆ

ಕೆಪಿಎಸ್‌ಸಿ ಬದಲು ಕೆಇಎ ಮೂಲಕ ನೇಮಕಾತಿ ನಡೆಸುವಂತೆ ಆಗ್ರಹ ವ್ಯಕ್ತವಾಗಿರುವ ಕುರಿತು ಮಾತನಾಡಿದ ಎ. ಮಂಜು, ತಮ್ಮ ಸಚಿವ ಅವಧಿಯಲ್ಲಿ 650 ಪಶುವೈದ್ಯರನ್ನು ನೇರ ನೇಮಕಾತಿ ಮಾಡಿದ್ದನ್ನು ನೆನಪಿಸಿದರು.

“ಕೆಪಿಎಸ್‌ಸಿಗೆ ನೇಮಕಾತಿ ಕೊಟ್ಟರೆ ಹಣದ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪಶುವೈದ್ಯರ ಹುದ್ದೆಗೆ ₹80 ಲಕ್ಷ ಕೇಳುತ್ತಿದ್ದಾರೆ ಎನ್ನುವುದು ಗಂಭೀರ ವಿಷಯ. ಇಷ್ಟು ಹಣ ಕೊಟ್ಟು ಉದ್ಯೋಗ ಪಡೆದವರು ರೈತರಿಂದ ಸುಲಿಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಆದ್ದರಿಂದ ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಪಾರದರ್ಶಕ ನೇಮಕಾತಿ ನಡೆಯಬೇಕು,” ಎಂದು ಆಗ್ರಹಿಸಿದರು.