ಹಾಸನ (kannadapost.com): ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ, ‘ಕರ್ಪೂರ ಪ್ರಿಯೆ’, ‘ಮೂಗುತಿ ಸುಂದರಿ’ ಎಂದೇ ಖ್ಯಾತಿ ಪಡೆದಿರುವ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ದೇವಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸುತ್ತಿರುವ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಹರಕೆಗಳನ್ನು ತೀರಿಸುತ್ತಿದ್ದಾರೆ.
6ನೇ ದಿನ ಗಣ್ಯರ ಭೇಟಿ, ದರ್ಶನ:
ಸ್ವರ್ಣ ಗೌರಿ ದರ್ಶನದ ಆರನೇ ದಿನವಾದ ಶನಿವಾರ, ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯದತ್ತ ಹೆಜ್ಜೆ ಹಾಕಿದರು. ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ನಾಯಕರು ಹಾಗೂ ಸರ್ಕಾರದ ಹಿರಿಯ-ಕಿರಿಯ ಅಧಿಕಾರಿಗಳು ದೇವಾಲಯಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದು ಪುನೀತರಾದರು.
ಕರ್ಪೂರದ ಅಗ್ನಿಕುಂಡ, ದುಗ್ಗಳದ ಹರಕೆ:
ದೇವಿಯ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು, ದೇವಾಲಯದ ಮುಂಭಾಗದಲ್ಲಿರುವ ಅಗ್ನಿಕುಂಡದಲ್ಲಿ ಕರ್ಪೂರ ಹಾಕಿ ಭಕ್ತಿ ಸಮರ್ಪಿಸಿದರು. ಇನ್ನು ಹಲವು ಭಕ್ತರು ದೇವಿಗೆ ಬೇಡಿಕೊಂಡಿದ್ದ ಹರಕೆಯನ್ನು ತೀರಿಸಲು, ತಮ್ಮ ತಲೆಯ ಮೇಲೆ ‘ದುಗ್ಗಳದ ಬಟ್ಟಲ’ನ್ನು ಹೊತ್ತು ಸಾಗುತ್ತಿದ್ದ ಭಕ್ತಿಭಾವದ ದೃಶ್ಯಗಳು ದೇವಾಲಯದ ಆವರಣದಲ್ಲಿ ಸಾಮಾನ್ಯವಾಗಿತ್ತು.
ಈ ವಿಶೇಷ ಸಂದರ್ಭದಲ್ಲಿ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿಗಳಾದ ಶ್ರೀ ಚೇತನ್ ಮರಿದೇವರು, ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ ಬ್ಯಾಂಕ್) ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಕೋಡಿಮಠದ ಏಜೆಂಟ್ ಹೆಚ್.ಸಿ. ಮಹದೇವಪ್ಪ ಹಾಗೂ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.












