- ಹಾಸನ ಜಿಲ್ಲೆಯನ್ನು ಕೂಡಲೇ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ. 80 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿ, ರೈತರ ಸಾಲಮನ್ನಾ ಹಾಗೂ ಬೆಳೆ ವಿಮೆ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಹಾಸನ, ಆ. 4 | ಕನ್ನಡಪೋಸ್ಟ್
ಹಾಸನ ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬೆಳೆ ರೋಗದ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಹಾಸನ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.
ಹೊಳೆನರಸೀಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಹಾಸನ ಜಿಲ್ಲೆಯಲ್ಲಿ ಕೇವಲ ಮೂರು-ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಈಗ ಅದರ ವ್ಯಾಪ್ತಿ ಸುಮಾರು ಮೂರು ಸಾವಿರ ಎಕರೆಗೆ ಹೆಚ್ಚಾಗಿದ್ದರೂ, ರೋಗಬಾಧೆಯಿಂದ ಈ ವರ್ಷದ ಆಲೂಗಡ್ಡೆ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ಹೇಳಿದರು.
80 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿ
ಈ ಬಾರಿ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಬೆಳೆ ನಾಶವಾಗಿದೆ ಎಂದು ಹೇಳಿದ ರೇವಣ್ಣ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ಷೇತ್ರಕ್ಕೆ ಭೇಟಿ ನೀಡಿ ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಾಲಮನ್ನಾ, ಬೆಳೆ ವಿಮೆ ಬಿಡುಗಡೆಗೆ ಆಗ್ರಹ
ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ತಕ್ಷಣ ರೈತರ ಸಾಲಮನ್ನಾ ಮಾಡಬೇಕು. ಕಳೆದ ವರ್ಷದ ಬೆಳೆ ವಿಮೆ ಹಣವೂ ಇನ್ನೂ ರೈತರಿಗೆ ತಲುಪಿಲ್ಲ ಎಂದು ಆರೋಪಿಸಿದ ಅವರು, ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈಗಾಗಲೇ ಮನವಿ ಮಾಡಿರುವುದಾಗಿ ತಿಳಿಸಿದರು.
ರೈತರಿಂದಲೇ ನೇರ ಖರೀದಿ ಮಾಡಿ
ರೈತರ ಬೆಳೆಗಳನ್ನು ಮಧ್ಯವರ್ತಿಗಳ ಮೂಲಕ ಖರೀದಿಸುವ ಬದಲು ಸರ್ಕಾರವೇ ನೇರವಾಗಿ ರೈತರಿಂದ ಖರೀದಿ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದರು. ಜೊತೆಗೆ ಮಹಾರಾಜರ ಕಾಲದ ಕಾಲುವೆಗಳಿಗೆ ನೀರು ಹರಿಸಿ, ರೈತರಿಗೆ ಯಾವ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅದು ಸಾಧ್ಯವಾಗದಿದ್ದರೆ ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಹೇಳಿದರು.
ತಮಿಳುನಾಡಿಗೆ ನೀರು ನೀಡುವ ಮುನ್ನ ರೈತರನ್ನು ಉಳಿಸಿ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಉದ್ದೇಶವಿದ್ದರೆ, ಮೊದಲು ಕರ್ನಾಟಕದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಶಿವಲಿಂಗೇಗೌಡರಿಗೆ ಶುಭ ಹಾರೈಕೆ
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಎಂ. ಶಿವಲಿಂಗೇಗೌಡ ನೇಮಕಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, “ನಮ್ಮ ಕೈಯಲ್ಲಿ ಆ ಕೆಲಸ ಆಗಲಿಲ್ಲ. ಅವರು ಉತ್ತಮ ಕೆಲಸ ಮಾಡಿ ಜಿಲ್ಲೆಯ ಜನರ ವಿಶ್ವಾಸ ಗಳಿಸಲಿ. ಅವರ ವಿರುದ್ಧ ನಮಗೆ ಯಾವುದೇ ದ್ವೇಷ ಇಲ್ಲ” ಎಂದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರ
ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, “ಅದು ಅವರ ಪಕ್ಷದ ಆಂತರಿಕ ವಿಚಾರ. ಮುಖ್ಯಮಂತ್ರಿ ಅವರಿಗೆ ಇನ್ನೂ ಎರಡು ವರ್ಷ ಅಧಿಕಾರವಿದೆ. ದೇವರು ನೀಡಿರುವ ಅವಕಾಶವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಲಿ. ನಾವು ಮಾಡುವ ಉತ್ತಮ ಕೆಲಸಗಳನ್ನು ಅವರೂ ಮಾಡಿದರೆ ಇನ್ನೂ ಸಂತೋಷ” ಎಂದು ಹೇಳಿದರು.












