ಹಾಸನ: ನಮ್ಮ ರೈತರು ಬಾಯಿ ಬಡ್ಕೊತಿದಾರೆ, ನಾವು ಖಾಲಿ ಡ್ಯಾಂಗೆ ಪೂಜೆ ಮಾಡ್ಬೇಕಾ?: ಎಚ್.ಡಿ.ರೇವಣ್ಣ ವಾಗ್ದಾಳಿ!

ಹಾಸನ (kannadapost.com): ಹೇಮಾವತಿ ಜಲಾಶಯದಿಂದ ಗುಟ್ಟಾಗಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಡ್ಯಾಂನಲ್ಲಿ 16 ರಿಂದ 18 ಟಿಎಂಸಿ ನೀರು ಖಾಲಿಯಾಗಿದೆ. ಮೊದಲು ನಮ್ಮ ರೈತರಿಗೆ ಹಾಗೂ ದನಕರುಗಳಿಗೆ ನೀರು ಕೊಡಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

​ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀರಾವರಿ, ಕಸ್ತೂರಿ ರಂಗನ್ ವರದಿ ಹಾಗೂ ತಮ್ಮ ಮೇಲಿನ ಆರೋಪಗಳ ಕುರಿತು ಸುದೀರ್ಘವಾಗಿ ಪ್ರತಿಕ್ರಿಯಿಸಿದರು.

ರೈತರು ಬಾಯಿ ಬಡಿದುಕೊಳ್ಳುತ್ತಿದ್ದಾರೆ: ನೀರೆಲ್ಲಾ ತಮಿಳುನಾಡಿಗೆ!

“ಮೊದಲು ಹೈಲೆವೆಲ್ ಚಾನೆಲ್‌ಗೆ ನೀರು ಹರಿಸುತ್ತಿದ್ದರು. ಆದರೆ ಈಗ ನೀರು ಬಿಟ್ಟರೂ ಹೈಲೆವೆಲ್ ಚಾನೆಲ್‌ಗೆ ನೀರು ಹರಿಯುತ್ತಿಲ್ಲ. ಯಾವ ಹಳ್ಳಿಗಳಿಗೂ ನೀರು ಹೋಗಿಲ್ಲ, ರೈತರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಬೆಳೆಗಳಿಗೆ ಬೇಡ, ಕನಿಷ್ಠ ದನಕರುಗಳಿಗೆ ಕುಡಿಯಲು ಮೊದಲು ಕೆರೆ-ಕಟ್ಟೆಗಳನ್ನು ತುಂಬಿಸಲಿ,” ಎಂದು ರೇವಣ್ಣ ಆಗ್ರಹಿಸಿದರು.

​”ಜಲಾಶಯದ 16 ಟಿಎಂಸಿ ನೀರು ಎಲ್ಲಿ ಹೋಯ್ತು? ಎಲ್ಲಾ ನೀರನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗಾದರೆ ನಾವೇನು ಖಾಲಿ ಡ್ಯಾಂಗೆ ಪೂಜೆ ಮಾಡಬೇಕಾ? ಎಲ್ಲಿಗೆ ನೀರು ಹರಿಸುತ್ತಿದ್ದಾರೆ ಎಂಬುದಕ್ಕೆ ಸರ್ಕಾರ ಮೊದಲು ಕಾರಣ ನೀಡಲಿ. ರಾಜಕೀಯ ಆಮೇಲೆ ಮಾಡೋಣ, ಮೊದಲು ನಮ್ಮ ರೈತರನ್ನು ಉಳಿಸಿಕೊಡಿ. ಕಾನೂನಿದ್ದರೆ ತಮಿಳುನಾಡಿಗೆ ನೀರು ಬಿಡಿ, ಬೇಡ ಅನ್ನಲ್ಲ. ಆದರೆ ಮಳೆಗಾಲ ಮುಗಿದಿದೆ, ಇನ್ನೂ ಮಳೆ ಬರಲ್ಲ. ಹೀಗಾಗಿ ಮೊದಲು ನಮ್ಮ ರೈತರಿಗೆ ನೀರು‌ ಕೊಡಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್ ವರದಿಗೆ ಸಂಪೂರ್ಣ ವಿರೋಧ:

ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಮಾತನಾಡಿದ ಅವರು, “ಈ ವರದಿಗೆ ನಮ್ಮ ಪಕ್ಷದ ಸಂಪೂರ್ಣ ವಿರೋಧ ಇದೆ. ಅಸೆಂಬ್ಲಿಯಲ್ಲಿ ಸರ್ವಾನುಮತದಿಂದ ಇದನ್ನು ವಿರೋಧ ಮಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಸರ್ವಪಕ್ಷ ನಿಯೋಗ ಹೋದರೆ ನಾವೂ ಹೋಗುತ್ತೇವೆ. ಸದನದಲ್ಲಿ ಇದರ ಬಗ್ಗೆ ಚರ್ಚೆಯೇ ಬೇಡ, ನಾವೆಲ್ಲಾ ರೆಡಿ ಇದ್ದೇವೆ, ಒಂದು ಸಾಲಿನ ನಿರ್ಣಯ (One-line resolution) ಮಾಡಲಿ. ಮುಖ್ಯಮಂತ್ರಿಗಳು ಮೂರು ದಿನಗಳಿಂದ ಕಷ್ಟಪಟ್ಟು ತಿರುಗಿದ್ದಾರೆ, ನಮ್ಮ ಬೆಂಬಲವೂ ಇದೆ,” ಎಂದು ಸ್ಪಷ್ಟಪಡಿಸಿದರು.

ಡಿಸಿಗೆ ನಾನು ಕಿರುಕುಳ ಕೊಟ್ಟಿಲ್ಲ:

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, “ಡಿಸಿಯವರಿಗೆ ಯಾರು ಕಿರುಕುಳ ಕೊಡ್ತಾರೋ ನನಗೆ ಗೊತ್ತಿಲ್ಲ. ನಾನು ಯಾವತ್ತೂ ಧಮ್ಕಿ ಹಾಕಿಲ್ಲ, ನಾನೇಕೆ ಕಿರುಕುಳ ಕೊಡಲಿ? ಅವರ ಆಫೀಸ್‌ಗೆ ಹೋಗಿ ಎರಡು ವರ್ಷ ಆಯ್ತು,” ಎಂದು ಸ್ಪಷ್ಟನೆ ನೀಡಿದರು.

​”ಡಿಸಿ ಕಚೇರಿಯಲ್ಲೇ ಕೆಲವರು ಫೋನ್ ಮೂಲಕ ಕುಮ್ಮಕ್ಕು ಕೊಡುತ್ತಾರೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಮ್ಮಕ್ಕು ಕೊಡಲಿ. ಅವರು ಕಾನೂನು ರೀತಿ ಕೆಲಸ ಮಾಡಲಿ, ಕೆಲಸ ಮಾಡಿದರೆ ಸಂತೋಷ, ಇಲ್ಲ ಅಂದ್ರೆ ಬೇಡ. ಡಿಸಿಗೆ ಕಿರುಕುಳ ಕೊಡುತ್ತಿರುವವರ ಹೆಸರು ಹೇಳಲಿ. ಇನ್ಮುಂದೆ ನಾನು ಈ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಏನೇ ಇದ್ದರೂ ಪತ್ರದ ಮೂಲಕವೇ ತಿಳಿಸುತ್ತೇನೆ,” ಎಂದು ತಿರುಗೇಟು ನೀಡಿದರು.