Atlantic:ಅಟ್ಲಾಂಟಿಕ್ ಮಹಾಸಾಗರದ ಕ್ರೂಸ್ ಹಡಗಿನಲ್ಲಿ ‘ಹಂಟಾ ವೈರಸ್’ ಹಾವಳಿ; ಮೂವರ ದುರ್ಮರಣ, ಜಗತ್ತಿನಾದ್ಯಂತ ಆತಂಕ!

  • ಅಟ್ಲಾಂಟಿಕ್ ಮಹಾಸಾಗರದಲ್ಲಿರುವ MV Hondius ಕ್ರೂಸ್ ಹಡಗಿನಲ್ಲಿ ಹಂಟಾ ವೈರಸ್ (Hantavirus) ಆತಂಕ ಸೃಷ್ಟಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮಾನವರಿಂದ ಮಾನವನಿಗೆ ಹರಡುವ ‘Andes strain’ ಭೀತಿ ಹಾಗೂ WHO ಎಚ್ಚರಿಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Atlantic:ಕರೋನಾ, ನಿಫಾ ಬೆನ್ನಲ್ಲೇ ಇದೀಗ ‘ಹಂಟಾ ವೈರಸ್’ (Hantavirus) ಜಗತ್ತಿನಾದ್ಯಂತ ಹೊಸ ಭೀತಿ ಸೃಷ್ಟಿಸಿದೆ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಯಾನ ಮಾಡುತ್ತಿದ್ದ ಡಚ್ ಫ್ಲ್ಯಾಗ್ ಕ್ರೂಸ್ ಶಿಪ್ ‘MV Hondius’ ನಲ್ಲಿ ಹಂಟಾ ವೈರಸ್ ಹಾವಳಿ ದೃಢಪಟ್ಟಿದ್ದು, ಈ ಮಹಾಮಾರಿಗೆ ಈಗಾಗಲೇ ಮೂವರು ಬಲಿಯಾಗಿದ್ದಾರೆ.

​ಲ್ಯಾಬ್ ಪರೀಕ್ಷೆಯಲ್ಲಿ 2 ಪ್ರಕರಣಗಳು ದೃಢಪಟ್ಟಿದ್ದು, ಸಂಶಯಿತ ಪ್ರಕರಣಗಳು ಸೇರಿ ಒಟ್ಟು 7 ರಿಂದ 8 ಕೇಸ್‌ಗಳು ವರದಿಯಾಗಿವೆ. ನಡು ನೀರಿನಲ್ಲಿರುವ ಹಡಗಿನಲ್ಲಿ ವೈರಸ್ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕ್ರೂಸ್ ಹಡಗಿನಲ್ಲಿ ಏನಾಗ್ತಿದೆ?

ಏಪ್ರಿಲ್ 1ರ ಸುಮಾರಿಗೆ ಅರ್ಜೆಂಟೀನಾದ ಉಶುವಾಯಾ (Ushuaia) ದಿಂದ ಹೊರಟಿದ್ದ ಈ ಹಡಗು, ಅಂಟಾರ್ಕ್ಟಿಕಾ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿ ಸದ್ಯ ಕೇಪ್ ವರ್ಡೆ (Cabo Verde) ಸಮೀಪ ಲಂಗರು ಹಾಕಿದೆ. ಹಡಗಿನಲ್ಲಿ ಒಟ್ಟು 23 ದೇಶಗಳ 147 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಯಾರಿಗೂ ಹಡಗಿನಿಂದ ಕೆಳಗಿಳಿಯಲು ಅನುಮತಿ ನೀಡಿಲ್ಲ. ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಏರ್‌ಲಿಫ್ಟ್ (Evacuate) ಮಾಡಲಾಗುತ್ತಿದೆ.

ಮಾನವರಿಂದ ಮಾನವನಿಗೆ ಹರಡುವ ‘Andes Strain’ ಭೀತಿ!

ಸಾಮಾನ್ಯವಾಗಿ ಹಂಟಾ ವೈರಸ್ ಮನುಷ್ಯರಿಂದ ಮನುಷ್ಯನಿಗೆ ಹರಡುವುದು ತೀರಾ ಅಪರೂಪ. ಇದು ಪ್ರಮುಖವಾಗಿ ಇಲಿಗಳ ಮಲ, ಮೂತ್ರ ಅಥವಾ ಲಾಲಾರಸದ ಮೂಲಕ ಹರಡುತ್ತದೆ. ಆದರೆ, ಈ ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡಿರುವುದು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ‘Andes strain’ ರೂಪಾಂತರಿ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮಾನ ವ್ಯಕ್ತಪಡಿಸಿದೆ. ಈ ಸ್ಟ್ರೈನ್ ಅಪರೂಪವಾಗಿ ಮನುಷ್ಯರ ನಡುವೆ ಹರಡುವ ಸಾಮರ್ಥ್ಯ ಹೊಂದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.

ರೋಗದ ಲಕ್ಷಣಗಳೇನು?

ಸೋಂಕು ತಗುಲಿದವರಲ್ಲಿ ಆರಂಭದಲ್ಲಿ ತೀವ್ರ ಜ್ವರ, ತಲೆನೋವು, ಸ್ನಾಯು ನೋವು ಹಾಗೂ ಜೀರ್ಣಾಂಗಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ತ್ವರಿತವಾಗಿ ನ್ಯುಮೋನಿಯಾವಾಗಿ ಪರಿವರ್ತನೆಗೊಂಡು, ಉಸಿರಾಟದ ತೊಂದರೆ ಉಂಟಾಗಿ ರೋಗಿ ಮೃತಪಡುವ ಸಾಧ್ಯತೆಗಳಿರುತ್ತವೆ. ಇದಕ್ಕೆ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇಲ್ಲದಿರುವುದರಿಂದ, ಸಹಾಯಕ ಚಿಕಿತ್ಸೆ (Supportive care) ಮಾತ್ರ ಲಭ್ಯವಿದೆ.

ಭಾರತದಲ್ಲಿ ಆತಂಕವಿದೆಯೇ? WHO ಹೇಳುವುದೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಜಗತ್ತಿನ ಜನಸಾಮಾನ್ಯರಿಗೆ ಇದರಿಂದ ಸದ್ಯಕ್ಕೆ ಅಪಾಯ ಕಡಿಮೆ ಎಂದಿದೆ. ಹಡಗಿನಲ್ಲಿ ಕಟ್ಟುನಿಟ್ಟಿನ ಕ್ರಮಗಳು ಮತ್ತು ಕಾಂಟ್ಯಾಕ್ಟ್ ಟ್ರೇಸಿಂಗ್ ನಡೆಯುತ್ತಿದೆ. ಭಾರತದಲ್ಲೂ ಇಲಿಗಳಲ್ಲಿ ಹಂಟಾ ವೈರಸ್ ಇರುವ ಪುರಾವೆಗಳಿದ್ದರೂ, ಈ ಕ್ರೂಸ್ ಘಟನೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೂ, ಇಲಿಗಳ ಹಾವಳಿ ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ.

​ಯಾವುದೇ ರೋಗದ ಲಕ್ಷಣ ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸ್ವಚ್ಛತೆಗೆ ಆದ್ಯತೆ ನೀಡಿ, ಎಚ್ಚರಿಕೆಯಿಂದಿರಿ, ಆದರೆ ಆತಂಕ ಬೇಡ!

– ಬ್ಯೂರೋ ರಿಪೋರ್ಟ್, ಕನ್ನಡ ಪೋಸ್ಟ್