- ಅರಸೀಕೆರೆ ತಾಲ್ಲೂಕಿನ ಮಾಡಾಳಿನಲ್ಲಿ ನಡೆದ ಶಿವಲಿಂಗಜ್ಜಯ್ಯನವರ 139ನೇ ಪುಣ್ಯಸ್ಮರಣೆಯಲ್ಲಿ ಸಾಧು-ಸಂತರ ಮಹತ್ವ ಹಾಗೂ ಗುರು ಪರಂಪರೆಯ ಬಗ್ಗೆ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೀಡಿದ ವಿಶೇಷ ಆಶೀರ್ವಚನ ಇಲ್ಲಿದೆ.
Madalu/ಅರಸೀಕೆರೆ: “ಸಾಧು-ಸಂತರು ಹಾಗೂ ಮಠಮಾನ್ಯಗಳನ್ನು ನೋಯಿಸಿ ನುಡಿಯುವ ಶಾಪವು ಮನುಷ್ಯನಿಗೆ ಜನ್ಮಜನ್ಮಾಂತರಕ್ಕೂ ಪಾಪದ ಮೂಟೆಯಾಗಿ ಕಾಡಲಿದೆ. ಇದರಿಂದ ಬದುಕಿನಲ್ಲಿ ನೆಮ್ಮದಿ ಇಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ” ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಂಗಳವಾರ ಮಾರ್ಮಿಕವಾಗಿ ನುಡಿದರು.
ತಾಲ್ಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಶ್ರೀಗಳ ಸಂಕಲ್ಪ ಹಾಗೂ ಸಾನಿಧ್ಯದಲ್ಲಿ ಆಯೋಜಿಸಲಾಗಿದ್ದ, ಕೋಡಿಮಠದ ಪರಮ ತಪಸ್ವಿ ಶಿವಲಿಂಗಜ್ಜಯ್ಯನವರ 139ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಭಕ್ತರಿಗೆ ಆಶೀರ್ವಚನ ನೀಡಿದರು.
ಗುರು ಪರಂಪರೆಗೆ ಅಗೌರವ ಸಲ್ಲಿಸಬೇಡಿ
ತಮ್ಮ ಆಶೀರ್ವಚನ ಮುಂದುವರಿಸಿದ ಶ್ರೀಗಳು, “ಸರ್ವ ಸಂಘ ಪರಿತ್ಯಾಗಿಗಳಾಗಿರುವ ಸಾಧು-ಸಂತರಿಗೆ ಮಾಡುವ ಅಪಪ್ರಚಾರ ಮತ್ತು ಅವರು ಪಡುವ ನೋವು ಸಂಬಂಧಪಟ್ಟವರ ವಂಶವನ್ನೇ ನಿರ್ನಾಮ ಮಾಡುತ್ತದೆ. ಹಾಗಾಗಿ ಗುರು ಪರಂಪರೆಯ ಮೇಲೆ ಶ್ರದ್ಧಾ-ಭಕ್ತಿಯಿಂದ ನಡೆದುಕೊಳ್ಳಬೇಕು. ‘ಹರ ಮುನಿದರೂ ಗುರು ಕಾಯುವನು’ ಎಂಬ ಮಾತಿನಂತೆ ಗುರುವಿಗೆ ಅತ್ಯಂತ ವಿಶಿಷ್ಟ ಸ್ಥಾನ ನೀಡಲಾಗಿದೆ. ಕೋಡಿಮಠವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ; ಇದು ಸರ್ವಧರ್ಮೀಯರಿಗೂ ಹರಸಿ ಮಾರ್ಗದರ್ಶನ ನೀಡುವ ಮಠವಾಗಿದೆ,” ಎಂದರು.
ಸಾಮರಸ್ಯದ ಸಂದೇಶ ಸಾರುತ್ತಿರುವ ಕೋಡಿಮಠ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಂದಿಗೂಡು ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಮಠಗಳು ಇಂದಿಗೂ ಅದೇ ಸಿದ್ಧಾಂತದಡಿ ಸಮಾಜ ಸೇವೆ ಮಾಡುತ್ತಿವೆ. ಕೋಡಿಮಠದ ಶ್ರೀಗಳು ಜಾತಿ, ಮತ, ಪಂಥ ಭೇದವಿಲ್ಲದೆ ಸಾಮರಸ್ಯದ ಸಹಬಾಳ್ವೆಯ ಸಂದೇಶ ಸಾರುತ್ತಿರುವುದು ಇತರ ಮಠಗಳಿಗೆ ಆದರ್ಶಪ್ರಾಯವಾಗಿದೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾಡಾಳಿನ ಮೂಲಸ್ಥಾನ ಗೌರಮ್ಮ ದೇವಿ ದೇವಾಲಯವು ಭವಿಷ್ಯದಲ್ಲಿ 11ನೇ ಶಕ್ತಿಪೀಠವಾಗಿ ಉಜ್ವಲವಾಗಿ ಬೆಳೆಯಲಿದೆ ಎಂದು ಶ್ರೀಗಳು ಆಶಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಜಿ.ಬಿ.ಟಿ. ಬಸವರಾಜ್, ಉದ್ಯಮಿ ಕೆ.ವಿ.ಎನ್. ಶಿವು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಶಂಕರ್ ನಾರಾಯಣ್ ಹಾಗೂ ಕುರುಬ ಸಮಾಜದ ಮುಖಂಡ ಶ್ರೀಧರ್ ಮಾತನಾಡಿದರು.
ಸಮಾರಂಭದಲ್ಲಿ ಬೊಮ್ಮನಹಳ್ಳಿ ಶಿವಯೋಗಿ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಮೂರು ಕಳಸು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಗೌರಮ್ಮ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್, ಎಸ್. ಮಲ್ಲಿಕಾರ್ಜುನಪ್ಪ, ಕೋಡಿಮಠದ ಏಜೆಂಟ್ ಮಹದೇವಪ್ಪ, ಎಂ.ಜಿ. ಶಿವಣ್ಣ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.










