Pune:ಆಘಾತಕಾರಿ ಘಟನೆ- ಮಾರ್ಕ್ಸ್ ಶೀಟ್ ತಿದ್ದಿದ್ದಾಳೆಂದು 9 ವರ್ಷದ ಮಗಳನ್ನೇ ಗರಗಸದಿಂದ ಕತ್ತರಿಸಿ‌ ಕೊಂದ ಅಪ್ಪ, ಮನೆಗೆ ಬೆಂಕಿ ಹಚ್ಚಿದ!

ಮಹಾರಾಷ್ಟ್ರದ ಪುಣೆಯಲ್ಲಿ ಅಂಕಪಟ್ಟಿ ತಿದ್ದಿದ್ದಕ್ಕೆ 9 ವರ್ಷದ ಮಗಳನ್ನು ಕರಗಸದಿಂದ ಕೊಯ್ದು ಕೊಂದ ತಂದೆ. ಸಾಕ್ಷ್ಯ ನಾಶಪಡಿಸಲು ಮನೆಗೆ ಬೆಂಕಿ ಹಚ್ಚಿದ್ದ ಆರೋಪಿ ಬಂಧನ.

  • Pune|ಪುಣೆ: ಅಂಕಪಟ್ಟಿಯಲ್ಲಿ (Marksheet) ತನ್ನ ರ‍್ಯಾಂಕ್ ತಿದ್ದಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಹೆತ್ತ ತಂದೆಯೇ 9 ವರ್ಷದ ಮಗಳನ್ನು ಮರ ಕೊಯ್ಯುವ ಗರಗಸದಿಂದ (Chainsaw) ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯವನ್ನು ಮುಚ್ಚಿಹಾಕಲು ಮನೆಗೇ ಬೆಂಕಿ ಹಚ್ಚಿ ನಾಟಕವಾಡಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

pune|ಪುಣೆ ಜಿಲ್ಲೆಯ ದೌಂಡ್ ತಾಲೂಕಿನ ದೇವಳಗಾಂವ್ ರಾಜೇ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಅನಾಮಿಕಾ ಶಾಂತಾರಾಮ್ ಚವಾಣ್ (9) ಕೊಲೆಯಾದ ದುರ್ದೈವಿ. ದಿನಗೂಲಿ ಕಾರ್ಮಿಕನಾಗಿದ್ದ ಈಕೆಯ ತಂದೆ ಶಾಂತಾರಾಮ್ ಚವಾಣ್ (33) ಹಾಗೂ ಈ ಕೃತ್ಯವನ್ನು ಮುಚ್ಚಿಹಾಕಲು ಸಹಾಯ ಮಾಡಿದ ಚಿಂಗು ಶಿಂಧ್‌ಬಾದ್ ಭೋಸಲೆ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ ಏನು?

ಮೃತ ಬಾಲಕಿ ಅನಾಮಿಕಾ 3ನೇ ತರಗತಿಯಲ್ಲಿ ಓದುತ್ತಿದ್ದು, ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಳು. ಈಕೆಯ ಅಣ್ಣ 4ನೇ ತರಗತಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದ. ಇದೇ ವಿಚಾರವಾಗಿ ಅಣ್ಣ-ತಂಗಿ ನಡುವೆ ತಮಾಷೆಯ ಜಗಳ ನಡೆದಿದೆ. ‘ನಾನು ಫಸ್ಟ್, ನೀನು ಸೆಕೆಂಡ್’ ಎಂದು ಅಣ್ಣ ರೇಗಿಸಿದ ಕಾರಣಕ್ಕೆ ಕೋಪಗೊಂಡ ಅನಾಮಿಕಾ, ಪೆನ್ ತೆಗೆದುಕೊಂಡು ಅಂಕಪಟ್ಟಿಯಲ್ಲಿ ತನ್ನ ರ‍್ಯಾಂಕ್ ಅನ್ನು 1 ಎಂದು, ಅಣ್ಣನ ರ‍್ಯಾಂಕ್ ಅನ್ನು 2 ಎಂದು ತಿದ್ದಿದ್ದಳು.

ಕೋಪದ ಭರದಲ್ಲಿ ರಕ್ತಪಾತ:

ಭಾನುವಾರ ಸಂಜೆ ಮನೆಗೆ ಬಂದ ತಂದೆ ಶಾಂತಾರಾಮ್ ಚವಾಣ್, ಅಂಕಪಟ್ಟಿ ತಿದ್ದಿರುವುದನ್ನು ನೋಡಿ ರೊಚ್ಚಿಗೆದ್ದಿದ್ದಾನೆ. ಮಗಳ ಮೇಲೆ ತೀವ್ರ ಹಲ್ಲೆ ನಡೆಸಿದ ಆತ, ಕೋಪದ ಭರದಲ್ಲಿ ಮರ ಕೊಯ್ಯುವ ಗರಗಸ (Chainsaw) ತೆಗೆದುಕೊಂಡು ಮಗಳ ಕುತ್ತಿಗೆ ಮತ್ತು ತಲೆಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಬೆಂಕಿ ಹಚ್ಚಿ ಹೈಡ್ರಾಮಾ:

ಕೊಲೆ ಮಾಡಿದ ನಂತರ ಕೃತ್ಯವನ್ನು ಮುಚ್ಚಿಹಾಕಲು, ತಂದೆ ಮಗಳ ಶವವನ್ನು ಸೀರೆಯಿಂದ ಸುತ್ತಿ, ತನ್ನದೇ ಮನೆಗೆ ಬೆಂಕಿ ಹಚ್ಚಿದ್ದಾನೆ. ಆಕಸ್ಮಿಕ ಬೆಂಕಿ ಅವಘಡದಲ್ಲಿ ಮಗಳು ಸಿಲುಕಿ ಸತ್ತಿದ್ದಾಳೆ ಎಂದು ಊರಿನವರ ಮುಂದೆ ನಾಟಕವಾಡಿದ್ದಾನೆ.

​ಆದರೆ, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ದೌಂಡ್ ಪೊಲೀಸರು ಪರಿಶೀಲನೆ ನಡೆಸಿದಾಗ, ರಕ್ತಸಿಕ್ತವಾದ ಕರಗಸ ಸಿಕ್ಕಿದೆ. ಪೊಲೀಸರ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಬಾಲಕಿಯ ಅರೆಬೆಂದ ಮೃತದೇಹವನ್ನು ವಶಕ್ಕೆ ಪಡೆದು ಸಸೂನ್ ಜನರಲ್ ಆಸ್ಪತ್ರೆಗೆ ಡಿಎನ್ಎ (DNA) ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ) ಮತ್ತು 238 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.