ಹಾಸನ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಆರಂಭವಾದ ಜಗಳ ತಾರಕಕ್ಕೇರಿದ್ದು, ಕೊನೆಗೆ ಸ್ನೇಹಿತನ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಗಣೇಶ (46) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಗಣೇಶನ ಸ್ನೇಹಿತರಾದ ಸುಧೀರ್ ಹಾಗೂ ಅಶೋಕ ಕೊಲೆ ಆರೋಪಿಗಳಾಗಿದ್ದಾರೆ.
ನಿನ್ನೆ ರಾತ್ರಿ ಕಾಡು ಹಂದಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಗಣೇಶ, ಸುಧೀರ್ ಮತ್ತು ಅಶೋಕ ಜಮೀನಿನ ಬಳಿ ತೆರಳಿದ್ದರು. ಈ ವೇಳೆ ಮೂವರು ಜಮೀನಿನಲ್ಲೇ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಮದ್ಯಪಾನದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ವಾಗ್ವಾದ ಆರಂಭವಾಗಿ, ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಮಾರ್ಪಟ್ಟಿದೆ.
ಗಲಾಟೆಯ ತೀವ್ರತೆಯಲ್ಲಿ ಆರೋಪಿಗಳಾದ ಸುಧೀರ್ ಮತ್ತು ಅಶೋಕ ಕುಡುಗೋಲಿನಿಂದ ಗಣೇಶನ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಜಮೀನಿನಲ್ಲೇ ಮೃತದೇಹವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ರಾತ್ರಿ ವೇಳೆ ಮೃತದೇಹದ ತಲೆ ಹಾಗೂ ಕುತ್ತಿಗೆ ಭಾಗವನ್ನು ಚಿರತೆ ಅಥವಾ ಮುಂಗುಸಿ (ಕೀರ) ಕಚ್ಚಿ ತಿಂದಿರುವ ಅನುಮಾನ ವ್ಯಕ್ತವಾಗಿದೆ.
ಬೆಳಿಗ್ಗೆ ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.










