10.1 C
Munich
Home ಜಿಲ್ಲೆ ಧರ್ಮಸ್ಥಳ ಬುರುಡೆ ರಹಸ್ಯ ಪುರಾಣ ಭಕ್ತರ ಭಾವನೆಗೆ ಧಕ್ಕೆ: ಮದನಗೌಡ

ಧರ್ಮಸ್ಥಳ ಬುರುಡೆ ರಹಸ್ಯ ಪುರಾಣ ಭಕ್ತರ ಭಾವನೆಗೆ ಧಕ್ಕೆ: ಮದನಗೌಡ

ಬೇಲೂರು: ಕೋಟ್ಯಂತರ ಭಕ್ತರ ಭಾವನೆಗಳ ಆರಾಧ್ಯದೈವ ಎಂದೇ ಖ್ಯಾತಿಯಾಗಿರುವ ಧರ್ಮಸ್ಥಳದ ಬಗ್ಗೆ ಇತ್ತೀಚಿಗೆ ಕೆಲವರು ವಿನಾ ಕಾರಣ ಇಲ್ಲ ಸಲ್ಲದ ಅಪ ಪ್ರಚಾರ ಮತ್ತು ಆರೋಪ ಮಾಡುತ್ತಾ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ಮಿತ್ರರು ವಾಸ್ತವಾಂಶಕ್ಕೆ ಗಮನ ನೀಡಬೇಕಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಗೌರವ ಕಾರ್ಯದರ್ಶಿ ಹೆಚ್.ಬಿ.ಮದನಗೌಡ ಕಿವಿ ಮಾತು ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜ ಮೈದಾನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ನಡೆಸುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯೊಂದಿಗೆ ಸ್ನೇಹಪರ ಕ್ರಿಕೆಟ್ ಕ್ರೀಡಾಕೂಟ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಆರು ತಿಂಗಳ ಹಿಂದೆ ನಾನು ಬೇಲೂರು ಪತ್ರಕರ್ತರ ಸಂಘದ ಸಮಾರಂಭದಲ್ಲಿ ಧರ್ಮಸ್ಥಳದ ಬಗ್ಗೆ ಮಾತನಾಡಿದ್ದೆ. ಅಲ್ಲಿ ಗುರುತರ ಕೃತ್ಯ ನಡೆದಿದ್ದರೆ ಸತ್ಯಾಂಶವನ್ನು ನಾಡಿಗೆ ತಿಳಿಸಲಿ. ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ಶ್ರೀಕ್ಷೇತ್ರದ ಮೇಲೆ ಅಪಪ್ರಚಾರಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ, ಸರ್ಕಾರ ಈ ಬಗ್ಗೆ ಜಾಗೃತ ಮನಸ್ಸಿನಿಂದ ಪರಿಶೀಲನೆ ನಡೆಸಬೇಕು ಎಂದರು.

ಕ್ರೀಡೆ ಮನುಷ್ಯನಿಗೆ ಅತ್ಯಮೂಲ್ಯ, ಕಾರಣ ಸದೃಢ ಆರೋಗ್ಯಕ್ಕೆ ದೈಹಿಕ ಕಸರತ್ತು ಮುಖ್ಯವಾಗಿದೆ. ವಿಶೇಷವಾಗಿ ಪತ್ರಕರ್ತರು ದಿನನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂಬ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ಸ್ನೇಹಪರ ಕ್ರಿಕೆಟ್ ಪಂದ್ಯಾವಳಿಗೆ ಮುಂದಾಗಿರುವುದು ಅರ್ಥಪೂರ್ಣವಾಗಿದೆ ಎಂದರು.

ಬೇಲೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಜಿಲ್ಲೆಯಲ್ಲಿ ಕ್ರಿಯಾಶೀಲತೆ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೇಲೂರು ಆರಕ್ಷಕ ನಿರೀಕ್ಷಕ ರೇವಣ್ಣ ಮಾತನಾಡಿ, ಪತ್ರಕರ್ತರಿಗೆ ಕ್ರೀಡೆ ಬಹಳ ಮುಖ್ಯವಾಗಿದೆ. ಏಕೆಂದರೆ ಕ್ರೀಡೆಯು ಅವರ ವೃತ್ತಿಜೀವನ ಮತ್ತು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡಾ ಪತ್ರಕರ್ತರು ಕಾರ್ಯಕ್ರಮಗಳನ್ನು ವರದಿ ಮಾಡುತ್ತಾರೆ, ವಿಶ್ಲೇಷಿಸುತ್ತಾರೆ ಮತ್ತು ಜಗತ್ತಿನಲ್ಲಿ ನಡೆಯುವ ಘಟನೆಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ಪತ್ರಕರ್ತರು ಕ್ರೀಡೆ ಮತ್ತು ಸಮಾಜದ ನಡುವಿನ ಸಂಬಂಧ ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು ಸಹಾಯ ಮಾಡುತ್ತಾರೆ.

ಬೇಲೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ಹಿಂದಿನಿಂದಲೂ ಕೂಡ ಸೌಹಾರ್ದತೆಯ ಕ್ರೀಡಾಕೂಟ ನಡೆಸುತ್ತಾ ಬಂದಿದ್ದು, ನಿಜಕ್ಕೂ ಅಗಮ್ಯವಾಗಿದೆ.ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಒಟ್ಟಿನಲ್ಲಿ ಭಾಗವಹಿಸುವುದು ಅತಿಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಬೇಲೂರು ಪತ್ರಕರ್ತರ ಸಂಘ ನಡೆಸುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾನು ಕೂಡ ಕ್ರೀಡಾಪಟುಗಳಾಗಿ ಭಾಗವಹಿಸುವೆ, ನಿಜಕ್ಕೂ ಇಂತಹ ಸ್ನೇಹಪರ ಕ್ರೀಡಾಕೂಟ ಹೆಚ್ಚಾಗಿ ನಡೆಯಲಿ ಎಂದು ನಮ್ಮದು ಅಶಯ ಎಂದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ಡಿ.ಬಿ.ಮೋಹನಕುಮಾರ್, ತಾಲ್ಲೂಕು ಅಧ್ಯಕ್ಷ ರಘುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜ್, ವೇಲಾಪುರಿ ಸಾಹಿತ್ಯ  ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೆಚ್.ಎಂ.ದಯಾನಂದ, ಪುರಸಭಾ ಆರೋಗ್ಯ ನಿರೀಕ್ಷಕ ಲೋಹಿತ್, ಡಾ.ರಾಜಕುಮಾರ ಸಂಘದ ಅಧ್ಯಕ್ಷ ತೀರ್ಥಂಕರ, ಖಜಾಂಚಿ ಎನ್.ಅನಂತು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು. ಮಾಜಿ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ನಿರೂಪಿಸಿದರು.

error: Content is protected !!