Chikkamagaluru ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್‌ನಲ್ಲಿ ಕಾಡುಕೋಣ ದಾಳಿಗೆ ಸಿಲುಕಿ ಚೇತನ್ (30) ಎಂಬ ಯುವಕ ಮೃತಪಟ್ಟಿದ್ದಾನೆ. ಪದೇ ಪದೇ ನಡೆಯುತ್ತಿರುವ ಕಾಡುಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತ ಬ್ರೇಕ್ ಹಾಕುವಂತೆ ಮಲೆನಾಡಿಗರ ಆಗ್ರಹ.
Chikkamaluru|ಚಿಕ್ಕಮಗಳೂರು/ಕಳಸ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ಮುಂದುವರಿದಿದ್ದು, ಕಾಡುಕೋಣ ದಾಳಿಗೆ 30 ವರ್ಷದ ಯುವಕನೋರ್ವ ಬಲಿಯಾಗಿರುವ ದಾರುಣ ಘಟನೆ ಕಳಸ ತಾಲೂಕಿನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಚೇತನ್ (30) ಎಂದು ಗುರುತಿಸಲಾಗಿದೆ. ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್‌ನಲ್ಲಿ ಈ ಘಟನೆ ಸಂಭವಿಸಿದೆ. ತೋಟದಲ್ಲಿರುವಾಗ ಏಕಾಏಕಿ ನುಗ್ಗಿ ಬಂದ ಕಾಡುಕೋಣ ಚೇತನ್ ಮೇಲೆ ತೀವ್ರವಾಗಿ ದಾಳಿ ಮಾಡಿದೆ.

ಚಿಕಿತ್ಸೆ ಫಲಿಸದೆ ಸಾವು, ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಕಾಡುಕೋಣದ ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಅವರನ್ನು ಕೂಡಲೇ ಕಳಸದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಯುವಕ ಕೊನೆಯುಸಿರೆಳೆದಿದ್ದಾನೆ.
ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಧಾರವಾಗಬೇಕಿದ್ದ, ಎದೆಮಟ್ಟಕ್ಕೆ ಬೆಳೆದು ನಿಂತಿದ್ದ ಮಗನನ್ನು ಕಳೆದುಕೊಂಡ ತಾಯಿಯ ಗೋಳಾಟ ಕಲ್ಲು ಕರಗಿಸುವಂತಿತ್ತು.
ಶಾಶ್ವತ ಪರಿಹಾರಕ್ಕೆ ಮಲೆನಾಡಿಗರ ಆಗ್ರಹ
ಕಳಸ ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಕಾಡುಕೋಣಗಳ ದಾಳಿ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಈ ಹಿಂದೆಯೂ ಇಂತಹ ದಾಳಿಗಳಿಗೆ ಸಿಲುಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೂ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ದಿನನಿತ್ಯ ಪ್ರಾಣಭಯದಲ್ಲೇ ತೋಟಗಳಿಗೆ ಕೆಲಸಕ್ಕೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪದೇ ಪದೇ ನಡೆಯುತ್ತಿರುವ ಈ ಕಾಡುಪ್ರಾಣಿಗಳ ದಾಳಿಗೆ ಹಾಗೂ ಕಾಡುಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತವಾಗಿ ಬ್ರೇಕ್ ಹಾಕುವಂತೆ ಮಲೆನಾಡಿಗರು ಅರಣ್ಯ ಇಲಾಖೆ ಹಾಗೂ ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.

ಈ ಸಂಬಂಧ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.










