14.6 C
Munich
Home News ಧರ್ಮಸ್ಥಳದತ್ತ ಹೊರಟ ಬಿಜೆಪಿ ಚಲೋ ಸರ್ಕಾರದ ನಡೆಗೆ ವಿಶ್ವನಾಥ್ ಅಸಮಾಧಾನ: ತಪ್ಪಿತಸ್ಥರಿಗೆ ಶಿಕ್ಷೆಗೆ ಆಗ್ರಹ

ಧರ್ಮಸ್ಥಳದತ್ತ ಹೊರಟ ಬಿಜೆಪಿ ಚಲೋ ಸರ್ಕಾರದ ನಡೆಗೆ ವಿಶ್ವನಾಥ್ ಅಸಮಾಧಾನ: ತಪ್ಪಿತಸ್ಥರಿಗೆ ಶಿಕ್ಷೆಗೆ ಆಗ್ರಹ

ಹಾಸನ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಹಾಗೂ ಎಸ್‌ಐಟಿ ತನಿಖೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಖಂಡಿಸಿ ಹಾಗೂ ಧರ್ಮಸ್ಥಳ ಪರವಾಗಿ ಬೆಂಗಳೂರಿನ ಯಲಹಂಕ ಕ್ಷೇತ್ರದ ಶಾಸಕ ಎಸ್. ಆರ್.ವಿಶ್ವನಾಥ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಧರ್ಮಸ್ಥಳ ಚಲೋ ಇಂದು ಹಾಸನ ನಗರದ ಮೂಲಕ ಹಾದು ಹೋಯಿತು.

ಧರ್ಮಸ್ಥಳದ ಜೊತೆ ನಾವು ಎಂಬ ಘೋಷಣೆಯೊಂದಿಗೆ ನೂರಾರು ಕಾರುಗಳು ಧರ್ಮಸ್ಥಳ ಕಡೆಗೆ ಸಂಚರಿಸಿದವು. ಬೆಳಗ್ಗೆ ಜಾಥಾದೊಂದಿಗೆ ನಗರ ತಲುಪಿದ ಎಸ್.ಆರ್ ವಿಶ್ವನಾಥಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆರತಿ ಬೆಳಗಿ ಸ್ವಾಗತ ಕೋರಿದರು. ಈ ವೇಳೆ ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದು ಎಲ್ಲರೂ ಘೋಷಣೆ ಕೂಗಿದರು. ನೂರಾರು ಕಾರುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಭಕ್ತರು ಧರ್ಮಸ್ಥಳ ಕಡೆಗೆ ಪ್ರಯಾಣ ಬೆಳೆಸಿದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿರುವ ಬೃಹತ್ ಜಾಥಾ, ಸಕಲೇಶಪುರ, ಶಿರಾಡಿಘಾಟ್, ಗುಂಡ್ಯಾ ಮೂಲಕ ಧರ್ಮಸ್ಥಳ ತಲುಪಿ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದೆ.

ಈ ವೇಳೆ ಮಾತನಾಡಿದ ವಿಶ್ವನಾಥ್, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದರು. ಸೌಜನ್ಯ ಕೇಸ್ ತನಿಖೆ ಮಾಡಲಿ ನಮ್ಮ ಅಡ್ಡಿ ಇಲ್ಲ, ಸ್ವಾಗತ ಮಾಡಿದ್ದೇವೆ, ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸ ಮಾಡುತ್ತಿದ್ದಾರೆ, ಮಂಜುನಾಥ ಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಮಂಜುನಾಥಸ್ವಾಮಿ ಶಕ್ತಿವಂತ ದೇವರು, ಯಾರು ಇಂತಹ ಅಪಪ್ರಚಾರ ಮಾಡಿದ್ದಾರೆ ಅವರಿಗೆ ಶಿಕ್ಷೆಯನ್ನು ಕೊಡಲಿ, ಸರ್ಕಾರ ಕೊಡುವ ಶಿಕ್ಷೆ ಬೇರೆ, ದೇವರು ಕೊಡುವ ಶಿಕ್ಷೆ ಬೇರೆ, ರಾಜ್ಯ, ದೇಶದಲ್ಲಿರುವ ಮಂಜುನಾಥಸ್ವಾಮಿ ಭಕ್ತರಿಗೆ ಘಾಸಿ ಆಗುವ ಕೆಲಸವನ್ನು ವಿಚಾರವಾದಿಗಳು, ಧರ್ಮ ವಿರೋಧಿಗಳು ಮಾಡಿಕೊಂಡು ಬರುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಿರಂತರ ಅಪ್ರಪಚಾರಕ್ಕೆ ಎಸ್‌ಐಟಿ ತನಿಖೆ ಅಗತ್ಯವಿತ್ತು, ಅನಾಮಿಕನ ಮಾತು ಕೇಳಿ ತಪ್ಪು ಮಾಡಿದ್ದೇವೆ ಅಂತ ಸರ್ಕಾರಕ್ಕೆ ಅನ್ನಿಸಿದೆ, ಅಧಿವೇಶನದಲ್ಲಿ ಸೋಮವಾರ ತನಿಖೆ ವರದಿ ಮಂಡಿಸಬೇಕು, ದೇವರು ಶಿಕ್ಷೆ ಕೊಡಬೇಕಾದರೆ ನಿಧಾನ ಆಗುತ್ತೆ, ಕಾಂಗ್ರೆಸ್‌ನವರು ಈಗ ಷಡ್ಯಂತ್ರ ಅಂತ ಹೇಳುತ್ತಿದ್ದಾರೆ, ಇದು ಹೇಗೆ ಎಂದು ಪ್ರಶ್ನಿಸಿದರು.

ನಾಳೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು, ಧರ್ಮಸ್ಥಳ ಭಕ್ತರಿಂದ ತುಂಬಿ ತುಳುಕಬೇಕು, ಜನರು ದೇವರ ಮೇಲೆ ವಿಶ್ವಾಸ ಕಳೆದುಕೊಳ್ಳಬಾರದು, ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಅವರ ವಿರುದ್ಧ ಸೋಮವಾರ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತಿದ್ದೇನೆ ಎಂದರು.

ಇದೇ ವೇಳೆ ಲಾಯರ್ ಜಗದೀಶ್ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಅವರ ಹೆಸರು ಹೇಳಲು ಅಸಹ್ಯ, ಅಂತಹ ಹುಚ್ಚುನಾಯಿಗಳನ್ನು ಸುಮ್ಮನೆ ಬಿಡಲು ಆಗಲ್ಲ, ಹೇಗೆ ಬುದ್ಧಿ ಕಲಿಸಬೇಕು ನಾವು ಕಲಿಸುತ್ತೇವೆ ಎಂದರು.

error: Content is protected !!