ಸಕಲೇಶಪುರ: ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮೇಘಸ್ಪೋಟಗೊಂಡ ರೀತಿಯಲ್ಲಿ ಸತತ ಮೂರು ತಾಸುಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಯಡಕುಮರಿಯಲ್ಲಿ ರೈಲ್ವೆ ಹಳಿ ಮೇಲೆ ಭೂಮಿ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿದ್ದರೆ, ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯ ಮೂರ್ನಾಲ್ಕು ಜಾಗಗಳಲ್ಲಿ ಮಣ್ಣು ರಸ್ತೆಗೆ ಕುಸಿದಿದ್ದು ಪೊಲೀಸರ ನಿಗಾದಲ್ಲಿ ನಿಧಾನಗತಿಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮಣ್ಣು ಕುಸಿದಿರುವ ಸ್ಥಳಗಳಲ್ಲಿ ಮೊಕ್ಕಾಂ ಹೂಡಿರುವ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು, ಜೆಸಿಬಿಗಳನ್ನು ಬಳಸಿ ರಸ್ತೆಗೆ ಬಿದ್ದ ಮಣ್ಣನ್ನು ತಕ್ಷಣ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಎಚ್ಚರವಹಿಸುತ್ತಿದ್ದಾರೆ.
ಆದರೆ ವಿಪರೀತ ಎನ್ನುವಷ್ಟು ಬಿರುಸಿನಿಂದ ಸುರಿಯುತ್ತಿರುವ ಮಳೆ ಇನ್ನಷ್ಟು ಗಂಟೆಗಳು ಮುಂದುವರಿದರೆ ಮತ್ತಷ್ಟು ಸಮಸ್ಯೆ ಉದ್ಭವವಾಗುವ ಆತಂಕ ಕಾಡುತ್ತಿದೆ.










