ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಒಂದು ದಿನದ ಪ್ರವಾಸ ಕೈಗೊಂಡಿದ್ದು ಬೆಂಗಳೂರಿನ ನೆಹರು ತಾರಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ವೈಜ್ಞಾನಿಕ ಮಾಹಿತಿ ಪಡೆದರು.
ಮುಖ್ಯ ಶಿಕ್ಷಕ ಕೆ.ಟಿ.ಅಶೋಕ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಇಂತಹ ಪ್ರವಾಸ ಅಗತ್ಯವಿದ್ದು ಸಾಮಾನ್ಯ ವಿಜ್ಞಾನದ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಆಧುನಿಕತೆಯೊಂದಿಗೆ ಮುಂದುವರೆಯುತ್ತಿರುವ ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯಗಳು ನಡೆಯಲಿದ್ದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದರ ಬಗೆಗಿನ ಮಾಹಿತಿ ಅಥವಾ ಪ್ರಾತ್ಯಕ್ಷಿತೆ ನೀಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ದಾರಿಯೂ ಸುಲಭವಾಗಿದೆ ಎಂದು ತಿಳಿಸಿದರು.
ಭಾರತೀಯರ ಅಂತರೀಕ್ಷಾ ಸಾಧನೆ, ನಕ್ಷತ್ರ ಮತ್ತು ಗ್ರಹಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳು ಅಂತರಿಕ್ಷದ ಬಗ್ಗೆ ಹಾಗೂ ಇತರೆ ವೈಜ್ಞಾನಿಕ ಮಾಹಿತಿಗಳನ್ನು ಶಿಕ್ಷಕರಿಂದ ಕೇಳಿ ಪಡೆದುಕೊಂಡಿದ್ದು ವಿಶೇಷವಾಗಿತ್ತು.
ಸಹ ಶಿಕ್ಷಕರಾದ ಪಾರ್ವತಮ್ಮ , ಶಿವಕುಮಾರ್, ಸ್ವಾಮಿ, ಕೃಷ್ಣೇಗೌಡ, ಶಿವಗಂಗಯ್ಯ, ಪೂರ್ಣಿಮಾ ಹಾಗೂ ಇತರರು ಇದ್ದರು.










