2.2 C
Munich
Home ಕ್ರೈಮ್‌ ಹಾಸನ: ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಪೋಸ್ಟ್ ಮಾರ್ಟಂ ವರದಿಯಲ್ಲಿ ಬೆಳಕಿಗೆ ಬಂತು ಆತಂಕಕಾರಿ ಅಂಶ!, ಈ...

ಹಾಸನ: ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಪೋಸ್ಟ್ ಮಾರ್ಟಂ ವರದಿಯಲ್ಲಿ ಬೆಳಕಿಗೆ ಬಂತು ಆತಂಕಕಾರಿ ಅಂಶ!, ಈ ಸೈಲೆಂಟಿ ಕಿಲ್ಲರ್ ತಡೆಯೋದು ಹೇಗೆ?

The postmortem examination of a person who died of a heart attack has shed light on several matters.

ಹಾಸನ, ಜುಲೈ 4, 2025:  ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ದಿಢೀರ್ ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳು ವೈದ್ಯಕೀಯ ತಜ್ಞರನ್ನೂ ಆಶ್ಚರ್ಯಕ್ಕೀಡುಮಾಡಿವೆ. ಇದರಲ್ಲಿ ಗಾಢವಾದ ಆತಂಕವೆಂದರೆ, ಸಾಮಾನ್ಯವಾಗಿ ಆರೋಗ್ಯವಾಗಿರುವವರೂ ಈ ಸೈಲೆಂಟ್ ಕಿಲ್ಲರ್‌ಗೆ ಬಲಿಯಾಗುತ್ತಿದ್ದಾರೆ. ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿಯೊಬ್ಬರ ಮರಣೋತ್ತರ ಪರೀಕ್ಷೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.

ದೇವರಾಜ್ ಪ್ರಕರಣ: ಆಘಾತಕಾರಿ ಸತ್ಯ
ಜೂನ್ 13ರಂದು ಕಾರಿನಲ್ಲಿಯೇ ಮೃತಪಟ್ಟ 43 ವರ್ಷದ ದೇವರಾಜ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ವೈದ್ಯಕೀಯ ತಜ್ಞರನ್ನು ಬೆಚ್ಚಿಬೀಳಿಸಿದೆ. ದೇವರಾಜ್ ಅವರಿಗೆ ಕೇವಲ ನಾಲ್ಕು ತಿಂಗಳ ಹಿಂದೆ ಇಸಿಜಿ, ಲಿಪಿಡ್ ಪ್ರೊಫೈಲ್ ಮತ್ತು ರಕ್ತ ಪರೀಕ್ಷೆ ಮಾಡಿಸಿದ್ದು, ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಹೃದಯದ ಎಡಭಾಗದ ಚೇಂಬರ್ ದೊಡ್ಡದಾಗಿರುವುದು, ಹೃದಯದ ಮಾಂಸಖಂಡದ ಮೇಲ್ಭಾಗ ಗಟ್ಟಿಯಾಗಿರುವುದು ಮತ್ತು ಕೆಳಭಾಗ ತೆಳ್ಳಗಿರುವುದು ಕಂಡುಬಂದಿದೆ. ಇದರ ಜೊತೆಗೆ, ಒಂದು ರಕ್ತನಾಳದಲ್ಲಿ 90% ಕೊಲೆಸ್ಟ್ರಾಲ್ ತುಂಬಿಕೊಂಡು ಬ್ಲಾಕ್ ಆಗಿತ್ತು. ಇಷ್ಟಾದರೂ, ದೇವರಾಜ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಲಕ್ಷಣಗಳು ಕಂಡುಬಂದಿರಲಿಲ್ಲ.

ವೈದ್ಯಕೀಯ ತಜ್ಞರ ಎಚ್ಚರಿಕೆ:
ಹೃದ್ರೋಗ ತಜ್ಞ ಡಾ. ಆಶಿತ್ ಶ್ರೀಧರ್ ಹೇಳಿಕೆಯ ಪ್ರಕಾರ, “ದೇವರಾಜ್ ಅವರಿಗೆ ಆರು ತಿಂಗಳ ಹಿಂದೆಯೇ ಹೃದಯಾಘಾತವಾಗಿತ್ತು, ಆದರೆ ಇದನ್ನು ಕ್ರಾನಿಕ್ ಹಾರ್ಟ್ ಫೇಲ್ಯೂರ್ ಎಂದು ಕರೆಯಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಎದೆನೋವನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ.” ಕೇವಲ ಇಸಿಜಿ ಮತ್ತು ರಕ್ತ ಪರೀಕ್ಷೆಯಿಂದ ಹೃದಯದ ಸಮಸ್ಯೆಯನ್ನು ಕಂಡುಹಿಡಿಯಲು ಸಾಧ್ಯವಿಲ್ಲ. “ಎಕೊ ಕಾರ್ಡಿಯೊಗ್ರಾಮ್ ಮಾಡಿಸಿದ್ದರೆ ದೇವರಾಜ್ ಅವರ ಹೃದಯದ ಪಂಪಿಂಗ್ ಸಮಸ್ಯೆಯನ್ನು ಮೊದಲೇ ಗುರುತಿಸಬಹುದಿತ್ತು,” ಎಂದು ಡಾ. ಆಶಿತ್ ತಿಳಿಸಿದ್ದಾರೆ.

ಸೈಲೆಂಟ್ ಹಾರ್ಟ್ ಅಟ್ಯಾಕ್‌ಗೆ ಕಾರಣಗಳು
– ಎದೆನೋವನ್ನು ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಭಾವಿಸುವುದು.
– ದೈಹಿಕ ಚಟುವಟಿಕೆಯಿದ್ದರೂ, ಹೃದಯದ ಒಳಗಿನ ಸಮಸ್ಯೆ ಗುರುತಿಸದಿರುವುದು.
– ಕೊಲೆಸ್ಟ್ರಾಲ್ ಮತ್ತು ಇಸಿಜಿ ಸಾಮಾನ್ಯವಾಗಿದ್ದರೂ, ಫೈಬ್ರೊಸ್ ಟಿಶ್ಯೂ ರಚನೆಯಾಗುವುದು.

ವೈದ್ಯರ ಸಲಹೆ
ವೈದ್ಯರು ಎಕೊ ಕಾರ್ಡಿಯೊಗ್ರಾಮ್‌ನಂತಹ ವಿಶೇಷ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸುವಂತೆ ಸಲಹೆ ನೀಡಿದ್ದಾರೆ. “ನಿತ್ಯ ವಾಕಿಂಗ್, ಆರೋಗ್ಯಕರ ಜೀವನಶೈಲಿಯಿದ್ದರೂ ಎಚ್ಚರಿಕೆಯಿಂದಿರಬೇಕು. ಹೃದಯಾಘಾತದ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಿ,” ಎಂದು ಡಾ. ಆಶಿತ್ ಎಚ್ಚರಿಸಿದ್ದಾರೆ.

ನಾವ್ಯಾರೂ ಸುರಕ್ಷಿತರಲ್ಲವೇ?:
ಈ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ನಿಯಮಿತ ಆರೋಗ್ಯ ತಪಾಸಣೆ, ವಿಶೇಷವಾಗಿ ಎಕೊ ಕಾರ್ಡಿಯೊಗ್ರಾಮ್‌ನಂತಹ ಪರೀಕ್ಷೆಗಳು ಜೀವ ಉಳಿಸಬಹುದು. ಆದರೆ ಎಲ್ಲರೂ ದಿನನಿತ್ಯ ಆ ಪರೀಕ್ಷೆ ಮಾಡಿಸಲು ಆಗುವುದಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕರ ತಜ್ಞರ ಅಧ್ಯಯನ ಆಧರಿಸಿ ಹೃದಯ ತಪಾಸಣೆಗೆ ಮಾರ್ಗಸೂಚಿ ಸಿದ್ಧಪಡಿಸುವ ಅಗತ್ಯ ಇದೆ.

error: Content is protected !!