ಹಾಸನ: ಎನ್.ಆರ್.ವೃತ್ತದಲ್ಲಿ ಹೊಯ್ಸಳ ಲಾಂಛನ ನಿರ್ಮಾಣಕ್ಕೆ ಮನವಿ

The move by the Municipal Corporation to install a statue of the Maharaja of Mysore, Narasimharaja Wodeyar, in the city's N.R. Circle is welcome.

ಹಾಸನ: ಮಹಾನಗರ ಪಾಲಿಕೆ ವತಿಯಿಂದ ನಗರದ ಎನ್.ಆರ್. ವೃತ್ತದಲ್ಲಿ ಮೈಸೂರು ಮಹಾರಾಜರಾದ ದಿ.ನರಸಿಂಹರಾಜ ಒಡೆಯರ ಪುತ್ಥಳಿಯನ್ನು ಸ್ಥಾಪಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ.

ಅದೇ ರೀತಿ ಜಿಲ್ಲೆಯ ಐತಿಹಾಸಿಕ ಅಸ್ಮಿತೆಯನ್ನು ಉಳಿಸುವ ದೃಷ್ಟಿಯಿಂದ ಹೊಯ್ಸಳರ ಲಾಂಛನ ಕೂಡ ನಿರ್ಮಿಸಿ ಅನಾವರಣಗೊಳಿಸಬೇಕು ಎಂದು ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಎನ್.ರಮೇಶ್ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ಮಹಾರಾಜರಾದ ನರಸಿಂಹರಾಜ ಒಡೆಯರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣಾರ್ಥ ಪುತ್ಥಳಿ ಸ್ಥಾಪನೆ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಇದೇ ರೀತಿಯಾಗಿ ಜಿಲ್ಲೆಯನ್ನು ಆಳಿದ ಹೊಯ್ಸಳರ ಕೊಡುಗೆ, ತ್ಯಾಗ ಮತ್ತು ಬಲಿದಾನ ಸ್ಮರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಹಾಸನ ಎಂದರೆ ಹೊಯ್ಸಳರು, ಹೊಯ್ಸಳರು ಎಂದರೆ ಹಾಸನ ಜಿಲ್ಲೆ ಎಂಬಂತೆ ಈ ನಾಡಿನ ಇತಿಹಾಸದಲ್ಲಿ ಅವರ ಪಾತ್ರ ಅತ್ಯಂತ ಮಹತ್ವ ದ್ದಾಗಿದೆ. ಆದರೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಹೊಯ್ಸಳ ಹೆಬ್ಬಾಗಿಲು ಹಾಗೂ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣ ಎಂಬ ಎರಡು ಹೆಸರುಗಳನ್ನು ಹೊರತುಪಡಿಸಿ, ನಗರದಲ್ಲಿ ಹೊಯ್ಸಳರ ಅಸ್ಮಿತೆ ಪ್ರತಿಬಿಂಬಿಸುವ ಯಾವುದೇ ಚಿಹ್ನೆಗಳು ಕಾಣಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎನ್.ಆರ್. ವೃತ್ತದಲ್ಲಿ ಹೊಯ್ಸಳರ ಲಾಂಛನ ಸ್ಥಾಪಿಸುವುದರಿಂದ ನಗರಕ್ಕೆ ಸೌಂದರ್ಯ ಹೆಚ್ಚಾಗುವುದರ ಜೊತೆಗೆ ನಮ್ಮ ಪಾರಂಪರಿಕ ಇತಿಹಾಸ ಹಾಗೂ ಸಾಂಸ್ಕ್ರತಿಕ ಕೊಡುಗೆಯನ್ನು ಸ್ಮರಿಸುವ ಮಹತ್ವದ ಕಾರ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಷ್ಟೊಂದು ಹೆಸರುವಾಸಿಯಾಗಲು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳೇ ಪ್ರಮುಖ ಕಾರಣವಾಗಿವೆ. ಆದ್ದರಿಂದ ಹೊಯ್ಸಳರ ಅಸ್ಮಿತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ರಾಜ ವೆಂಕಟೇಶ್, ರಾಧಾ ತಿವಾರಿ ಹಾಗೂ ಚಂದ್ರಣ್ಣ ಇದ್ದರು.

The move by the Municipal Corporation to install a statue of the Maharaja of Mysore, Narasimharaja Wodeyar, in the city’s N.R. Circle is welcome.