ಹಾಸನ: ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಹಾಗೂ ಮಹಿಳಾ ನಿರ್ವಾಹಕಿಯ (Conductor) ನಡುವೆ ಭಾರಿ ಜಡೆ ಜಗಳ ನಡೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ವರದಿಯಾಗಿದೆ. ಇತರ ಪ್ರಯಾಣಿಕರ ಎದುರೇ ಇಬ್ಬರು ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೇಲೂರಿನಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ನಲ್ಲಿ ಈ ಹೈಡ್ರಾಮಾ ನಡೆದಿದೆ. ಬಸ್ ಹಾಸನ ಜಿಲ್ಲೆಯ ಬೇಲೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಸಂಚರಿಸುತ್ತಿದ್ದ ವೇಳೆ, ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮಹಿಳೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ಇಳಿದಿದ್ದಾರೆ.
ಪ್ರಯಾಣಿಕರ ನಡುವಿನ ಜಗಳ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಬಸ್‌ನ ಮಹಿಳಾ ನಿರ್ವಾಹಕಿ, ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಬುದ್ಧಿ ಹೇಳಲು ಮುಂದಾಗಿದ್ದಾರೆ. ಆದರೆ, ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮಹಿಳೆ ಏಕಾಏಕಿ ಬುದ್ಧಿ ಹೇಳಲು ಬಂದ ನಿರ್ವಾಹಕಿಯ ಮೇಲೆಯೇ ಎರಗಿದ್ದಾಳೆ. ಅಷ್ಟೇ ಅಲ್ಲದೆ, ನಿರ್ವಾಹಕಿಯ ಕೈಯಲ್ಲಿದ್ದ ಟಿಕೆಟ್ ಮಷಿನ್ ಅನ್ನು ಕೂಡ ಎಳೆದಾಡಿದ್ದಾಳೆ.
ಮಹಿಳೆಯ ಈ ವರ್ತನೆಯಿಂದ, ಟಿಕೆಟ್ ಮಷಿನ್ ಎಳೆದಿದ್ದರಿಂದ ಆಕ್ರೋಶಗೊಂಡ ನಿರ್ವಾಹಕಿ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ಇಬ್ಬರೂ ಪರಸ್ಪರ ತೀವ್ರವಾಗಿ ಬಡಿದಾಡಿಕೊಂಡಿದ್ದಾರೆ. ಸದ್ಯ ಈ ಜಡೆ ಜಗಳವನ್ನು ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.











