Hassan Dry Day: ಹಾಸನ ಜಿಲ್ಲೆಯಾದ್ಯಂತ 2 ದಿನ ಮದ್ಯ ಮಾರಾಟ ನಿಷೇಧ; ಕಾರಣ ಇಲ್ಲಿದೆ!

ಹಾಸನ: ಮಾಜಿ ಪ್ರಧಾನಮಂತ್ರಿ  ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ (84) ಅವರ ನಿಧನದ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಪಾನ ನಿರೋಧ (Dry Day) ಘೋಷಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

​ಜುಲೈ 19 ರಿಂದ 20 ರವರೆಗೆ ಮದ್ಯ ನಿಷೇಧ:

ಶ್ರೀಮತಿ ಚೆನ್ನಮ್ಮ ಅವರು ಜುಲೈ 18 ರಂದು ಶನಿವಾರ ಅಸ್ತಂಗತರಾಗಿದ್ದು, ಅವರ ಮೃತದೇಹದ ಅಂತ್ಯಸಂಸ್ಕಾರವನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜುಲೈ 20 ರ ಸೋಮವಾರದಂದು ನೆರವೇರಿಸಲು ನಿರ್ಧರಿಸಲಾಗಿದೆ.

​ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜುಲೈ 19ರ ಭಾನುವಾರ ಬೆಳಿಗ್ಗೆ 06:00 ಗಂಟೆಯಿಂದ ಜುಲೈ 20ರ ಸೋಮವಾರ ಮಧ್ಯರಾತ್ರಿ 12:00 ಗಂಟೆಯವರೆಗೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಪಾನ ನಿರೋಧ ದಿನವೆಂದು ಘೋಷಿಸಲಾಗಿದೆ.

​ಯಾವುದಕ್ಕೆಲ್ಲಾ ನಿರ್ಬಂಧ?

ಜಿಲ್ಲಾಧಿಕಾರಿಗಳ ಆದೇಶದನ್ವಯ, ಹಾಸನ ಜಿಲ್ಲೆಯಾದ್ಯಂತ ಈ ಕೆಳಗಿನ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:

  • ​ಎಲ್ಲಾ ಬಗೆಯ ಮದ್ಯ ಹಾಗೂ ಅಮಲು ಪಾನೀಯಗಳ ಶೇಖರಣೆ.
  • ​ಸರ್ಕಾರಿ ಹಾಗೂ ಖಾಸಗಿ ಮದ್ಯದ ಅಂಗಡಿಗಳು, ಬಾರ್, ಕ್ಲಬ್, ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟ.
  • ​ಡಾಬಾಗಳು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸರಬರಾಜು ಮಾಡುವುದು.
  • ​ಮದ್ಯದ ಸಾಗಾಟ ಮತ್ತು ಯಾವುದೇ ರೀತಿಯ ವಿತರಣೆ.

​ಬಿಗಿ ಪೊಲೀಸ್ ಬಂದೋಬಸ್ತ್:

ಶ್ರೀಮತಿ ಚೆನ್ನಮ್ಮ ಅವರ ಅಂತಿಮ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಗಣ್ಯರು, ರಾಜಕೀಯ ಮುಖಂಡರು, ಜೆಡಿಎಸ್ ಪಕ್ಷದ ಸಹಸ್ರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಜಿಲ್ಲಾಡಳಿತ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.