ಹಾಸನ : ಹಾಸನ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗದ್ದು, ಮಧ್ಯಾಹ್ನ 1.30 ನಂತರ ಪ್ರಕ್ರಿಯೆ ಜರುಗಲಿದೆ. ಅಭ್ಯರ್ಥಿಗಳ ಅಂತಿಮ ಆಯ್ಕೆ ಕುರಿತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಎಲ್ಲ ಸದಸ್ಯರೊಂದಿಗೆ ಸಭೆ ನಡೆಸಿ ತಂತ್ರ ಚರ್ಚೆ ನಡೆಸಿದರು. ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ, “ನೀವೇ ಪರಸ್ಪರ ಚರ್ಚಿಸಿ ತೀರ್ಮಾನ ಕೈಗೊಳ್ಳಿ” ಎಂದು ರೇವಣ್ಣ ಸಲಹೆ ನೀಡಿರುವುದು ತಿಳಿದುಬಂದಿದೆ.
ಇಂದು ಬೆಳಗ್ಗೆ ಹಾಲಿನ ಡೇರಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅದರಲ್ಲಿ ಅಂತಿಮ ತೀರ್ಮಾನ ಹೊರಬರುವ ಸಾಧ್ಯತೆ ಇದೆ. ನಾಲ್ವರು ಮೇಯರ್ ಆಕಾಂಕ್ಷಿಗಳು — ಗಿರೀಶ್ ಚನ್ನವೀರಪ್ಪ, ಅಶ್ವಿನಿ ಮಹೇಶ್, ರಫೀಕ್ ಹಾಗೂ ಅಮೀರ್ ಜಾನ್ — ಹೆಸರು ಚರ್ಚೆಯಲ್ಲಿದ್ದು, ಇವರ ನಡುವೆ ಯಾರು ಮೇಯರ್ ಪಟ್ಟಕ್ಕೇರಲಿದ್ದಾರೆ ಎಂಬ ಕುತೂಹಲ ಮೂಡಿದೆ.
ರೇವಣ್ಣ ಎಲ್ಲ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದು, ಬಹುತೇಕವಾಗಿ ಗಿರೀಶ್ ಚನ್ನವೀರಪ್ಪಗೆ ಅವಕಾಶ ಸಿಗುವ ಸಾಧ್ಯತೆ ಬಲವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನ್ಯಾಯಾಲಯದಲ್ಲಿ ಅನರ್ಹತೆ ಪ್ರಶ್ನಿಸಿ ಮಾಜಿ ಮೇಯರ್ ಚಂದ್ರೇಗೌಡ ಸಲ್ಲಿಸಿರುವ ಮೇಲ್ಮನವಿ ತೀರ್ಪು ಕಾಯ್ದಿರಿಸಿರುವುದರಿಂದ ಅವರಿಗೆ ಇಂದು ಸಭೆಗೆ ಪ್ರವೇಶ ಇರುವುದಿಲ್ಲ ಎನ್ನಲಾಗುತ್ತಿದೆ.










