14.6 C
Munich
Home News ಚನ್ನರಾಯಪಟ್ಟಣ: ಗ್ರಾಪಂ ಕೇಂದ್ರಗಳಲ್ಲಿ ಶಾಲೆ ತೆರೆದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ

ಚನ್ನರಾಯಪಟ್ಟಣ: ಗ್ರಾಪಂ ಕೇಂದ್ರಗಳಲ್ಲಿ ಶಾಲೆ ತೆರೆದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ

ಚನ್ನರಾಯಪಟ್ಟಣ: ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಒಂದೇ ಸೂರಿನಡಿ ೧ ರಿಂದ ೧೦ ನೇ ತರಗತಿ ವರಗೆ ಶಾಲೆ ತೆರೆದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಹನ ಕಲ್ಪಿಸಿದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಹೊಂದಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಿಂದ ಮಕ್ಕಳ ಹಾಜರಾತಿಯ ಕೊರತೆ ಪರಿಣಾಮ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದು ಈಗಾಗಲೇ ತಾಲೂಕಿನಲ್ಲಿ ಬಹುತೇಕ ಶಾಲೆಗಳ ಬಾಗಿಲು ಮುಚ್ಚಲಾಗಿದೆ. ಈ ಒತ್ತಡದ ನಡುವೆಯು ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿನ್ನೆಲೆಯಲ್ಲಿ ಸರ್ಕಾರವು ಇತ್ತ ಗಮನಹರಿಸಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಆಂಗ್ಲ ಮಾಧ್ಯಮದ ವ್ಯವಸ್ಥೆಯೊಂದಿಗೆ ೧೦ ನೇ ತರಗತಿ ವರಗೆ ಶಾಲೆ ತೆರೆದು ಕಡಿಮೆ ಹಾಜರಾತಿ ಹೊಂದಿರುವ ಎಲ್ಲ ಶಾಲೆಗಳನ್ನು ಒಂದುಗೂಡಿಸಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿದರೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮೂಡುಬಿದರೆಯ ಎಕ್ಷಲೆಂಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ವಾದಿರಾಜ್ ಕಲ್ಲೂರಾಯ ಮಾತನಾಡಿ, ತನ್ನೊಳಗಿನ ಜ್ಞಾನದ ಬುತ್ತಿಯನ್ನು ಧಾರೆ ಎರೆಯುವ ಮೂಲಕ ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕರೆತಂದು ಸದ್ಮಾರ್ಗ ತೋರಿದ ಗುರುವಿನ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.

ಇನ್ನು ಶಿಕ್ಷಕರಾದವರು ತಾವು ಕಲಿತ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ದಾನ ಮಾಡದಿದ್ದಲ್ಲಿ ಅದೂ ಸಹ ವ್ಯರ್ಥವಾಗಲಿದೆ. ವಿದ್ಯೆ ಸುಮ್ಮನೆ ಸಿಗುವ ವಸ್ತುವಲ್ಲ. ಅಪಾರ ಶ್ರದ್ದೆ, ಶಿಸ್ತು ಹಾಗೂ ಸಮ್ಯಮದಿಂದ ಧೀಕ್ಷೆಯಾಗಿ ಸ್ವೀಕರಿಸಿದರೆ ಮಾತ್ರ ನಮಗೆ ಒಲಿಯಲಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ, ಈ ಭೂಮಿಯ ಮೇಲೆ ಸಾಧ್ಯವಿಲ್ಲ ಎಂಬ ಯಾವುದೇ ಕೆಲಸವಿಲ್ಲ. ಮನಸ್ಸು ಮಾಡಿದರೆ ಬೇಕೆನಿಸಿದನ್ನೆಲ್ಲ ಸಾಧಿಸಬಹುದು. ಆದರೆ ಒಂದೇ ಮನಸ್ಸು ಹಾಗೂ ಗುರಿ ಹೊಂದಿರಬೇಕು. ಉತ್ತಮ ಶಿಕ್ಷಣ ಕಲಿತರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವಷ್ಟು ಸಾಮರ್ಥ್ಯ ಬೆಲೆಯಲಿದೆ ಎಂದರು.

ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರಿಗೆ ಅಭಿನಂದಿಸಲಾಯಿತು. ಪುರಸಭೆ ಅಧ್ಯಕ್ಷ ಕೋಟೆ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್.ದೀಪ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಅಕ್ಷರ ದಾಸೊಹ ಸಹಾಯಕ ನಿರ್ದೇಶಕ ಉಮಾಶಂಕರ್, ಪುರಸಭೆ ಮುಖ್ಯಾಧಿಕಾರಿ ಯತೀಶ್‌ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜೆ.ಆರ್.ಹರೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಹೆಚ್.ಎನ್.ಲೋಕೇಶ್, ಪ್ರಮುಖರಾದ ಆನಂದ್, ರವಿಶಂಕರ್, ಮಂಜುನಾಥ್ ಹಾಗೂ ಇತರರು ಇತರರು ಇದ್ದರು.

error: Content is protected !!