- ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಂಡಿಕೇರಿ ಗ್ರಾಮದಲ್ಲಿ ಪಾಳುಬಿದ್ದ ಬಾವಿಗೆ ಬಿದ್ದಿದ್ದ ಬೀದಿನಾಯಿಯನ್ನು ಪ್ರಾಣದ ಹಂಗುತೊರೆದು ರಕ್ಷಿಸಿದ ಬಾಲಕ ಅಕುಲ್. ಮೂಕಪ್ರಾಣಿ ಉಳಿಸಿದ ಸಾಹಸಕ್ಕೆ ಭಾರಿ ಮೆಚ್ಚುಗೆ
ಹಾಸನ: ಪಾಳುಬಿದ್ದ ತೆರೆದ ಬಾವಿಗೆ ಬಿದ್ದು ನರಳಾಡುತ್ತಿದ್ದ ಬೀದಿನಾಯಿಯೊಂದನ್ನು ಬಾಲಕನೊಬ್ಬ ತನ್ನ ಪ್ರಾಣದ ಹಂಗುತೊರೆದು ರಕ್ಷಿಸಿರುವ ಹೃದಯಸ್ಪರ್ಶಿ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಂಡಿಕೇರಿ ಗ್ರಾಮದಲ್ಲಿ ನಡೆದಿದೆ. ಮೂಕಪ್ರಾಣಿಯ ಜೀವ ಉಳಿಸಿದ ಬಾಲಕ ಅಕುಲ್ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಹಳೆಯ ಬಾವಿಗೆ ಬಿದ್ದಿದ್ದ ಶ್ವಾನ
ಮಂಡಿಕೇರಿ ಗ್ರಾಮದಲ್ಲಿರುವ ಪಾಳು ಬಿದ್ದಿದ್ದ ತೆರೆದ ಬಾವಿಗೆ ಆಯತಪ್ಪಿ ಬೀದಿನಾಯಿಯೊಂದು ಬಿದ್ದಿತ್ತು. ಬಹಳ ಆಳವಿದ್ದ ಬಾವಿಯಿಂದ ಮೇಲೆ ಬರಲಾಗದೆ ಶ್ವಾನ ನರಳಾಡುತ್ತಿತ್ತು. ನಾಯಿಯ ನರಳಾಟವನ್ನು ಕಂಡ ಗ್ರಾಮದ ಬಾಲಕ ಅಕುಲ್ನ ಮನಸ್ಸು ಕರಗಿದ್ದು, ತಕ್ಷಣವೇ ಅದನ್ನು ರಕ್ಷಿಸಲು ಮುಂದಾಗಿದ್ದಾನೆ.
ಕಾರ್ಯಾಚರಣೆ ಹೇಗಿತ್ತು?
ಸ್ಥಳೀಯ ಯುವಕನೊಬ್ಬನ ಸಹಾಯ ಪಡೆದ ಅಕುಲ್, ನಾಯಿ ರಕ್ಷಣೆಗೆ ವಿನೂತನ ಐಡಿಯಾ ಮಾಡಿದ್ದಾನೆ.
- ಹಳೆಯ ಟೈರ್ಗೆ ಹಗ್ಗ ಕಟ್ಟಿಕೊಂಡು, ಕೈಯಲ್ಲೊಂದು ಚೀಲ ಹಿಡಿದು ಅಕುಲ್ ಧೈರ್ಯವಾಗಿ ಬಾವಿಗಿಳಿದಿದ್ದಾನೆ.
- ಬಾಲಕ ಬಾವಿಗಿಳಿಯುತ್ತಿದ್ದಂತೆ ಗಾಬರಿಗೊಂಡ ಶ್ವಾನ ತಪ್ಪಿಸಿಕೊಳ್ಳಲು ಯತ್ನಿಸಿದೆ. ಬಾವಿಯೊಳಗೆ ನಾಯಿಯನ್ನು ಸುರಕ್ಷಿತವಾಗಿ ಹಿಡಿದು ಚೀಲದೊಳಗೆ ತುಂಬಲು ಅಕುಲ್ ಹರಸಾಹಸಪಡಬೇಕಾಯಿತು.
- ಕೊನೆಗೂ ಸತತ ಪ್ರಯತ್ನದ ಬಳಿಕ ನಾಯಿಯನ್ನು ಚೀಲದೊಳಗೆ ಹಾಕುವಲ್ಲಿ ಯಶಸ್ವಿಯಾದ ಬಾಲಕ, ಆ ಚೀಲಕ್ಕೆ ಹಗ್ಗ ಕಟ್ಟಿದ್ದಾನೆ.
- ಬಾವಿಯ ಮೇಲಿದ್ದ ಯುವಕ ನಾಯಿಯಿದ್ದ ಚೀಲವನ್ನು ಮೇಲೆಳೆದುಕೊಂಡು, ಚೀಲದಿಂದ ನಾಯಿಯನ್ನು ಹೊರಗೆ ಬಿಟ್ಟಿದ್ದಾನೆ.
- ನಾಯಿಯನ್ನು ಸುರಕ್ಷಿತವಾಗಿ ಮೇಲೆ ಕಳುಹಿಸಿದ ನಂತರ, ಅಕುಲ್ ಅದೇ ಟೈರ್ನ ಸಹಾಯದಿಂದ ಬಾವಿಯಿಂದ ಮೇಲೆ ಹತ್ತಿ ಬಂದಿದ್ದಾನೆ.
ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಬಾವಿಗಿಳಿದು ಸಾಹಸ ಮೆರೆದ ಬಾಲಕ ಅಕುಲ್ನ ಮಾನವೀಯತೆಗೆ ಗ್ರಾಮಸ್ಥರು ಹಾಗೂ ನೆಟ್ಟಿಗರು ಹ್ಯಾಟ್ಸಾಫ್ ಹೇಳಿದ್ದಾರೆ.












