ಹಾಸನ ಪೊಲೀಸ್ ಪರೀಕ್ಷೆ OMR ಗೊಂದಲ: KEA ಮಹತ್ವದ ಸ್ಪಷ್ಟನೆ | Hassan News

  • ಹಾಸನದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ OMR ಮತ್ತು ಪ್ರಶ್ನೆಪತ್ರಿಕೆ ನಂಬರ್ ಗೊಂದಲದ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಸ್ಪಷ್ಟನೆ. ಸುಳ್ಳು ಸುದ್ದಿ ನಂಬದಂತೆ ಮನವಿ.

ಹಾಸನ: ನಿನ್ನೆ (ಭಾನುವಾರ) ಹಾಸನದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿಯ ಲಿಖಿತ ಪರೀಕ್ಷೆಯಲ್ಲಿ ಉಂಟಾಗಿದ್ದ ಒಎಂಆರ್ (OMR) ಶೀಟ್ ಗೊಂದಲದ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬದಂತೆ ಪ್ರಾಧಿಕಾರ ಅಭ್ಯರ್ಥಿಗಳಲ್ಲಿ ಮನವಿ ಮಾಡಿದೆ.

​ಪರೀಕ್ಷಾ ಕೇಂದ್ರದಲ್ಲಿ ಆಗಿದ್ದೇನು?

​ಹಾಸನ ನಗರದ ಆರ್‌ಸಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರ 512ರ ಕೊಠಡಿ ಸಂಖ್ಯೆ 15 ಮತ್ತು 16ರಲ್ಲಿ ನಿನ್ನೆ ಗೊಂದಲ ನಿರ್ಮಾಣವಾಗಿತ್ತು. ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ ಕ್ರಮ ಸಂಖ್ಯೆ ಒಂದೇ ಆಗಿಲ್ಲ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಪರಿಸ್ಥಿತಿ ತಿಳಿಗೊಳಿಸಿ, ಆ ಎರಡು ಕೊಠಡಿಗಳ ಪರೀಕ್ಷಾರ್ಥಿಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು.

​KEA ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರ ಸ್ಪಷ್ಟನೆ

​ಈ ಘಟನೆಯ ಕುರಿತು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸೃಷ್ಟಿಯಾಗಿರುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

  • ಕ್ರಮ ಸಂಖ್ಯೆ ಒಂದೇ ಆಗಿರುವ ನಿಯಮವಿಲ್ಲ: “ಪರೀಕ್ಷಾರ್ಥಿಗಳಿಗೆ ವಿತರಿಸಲಾಗಿದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಒಂದೇ ಆಗಿಲ್ಲವೆಂದು ವದಂತಿ ಸೃಷ್ಟಿಸಲಾಗಿದೆ. ಪ್ರಾಧಿಕಾರವು ಯಾವುದೇ ಪ್ರಕಟಣೆಯಲ್ಲಾಗಲೀ, ಸೂಚನೆಗಳಲ್ಲಾಗಲೀ ಅಥವಾ ಮಾಧ್ಯಮಗಳ ಮೂಲಕವಾಗಲೀ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಒಂದೇ ಇರುತ್ತದೆ ಅಥವಾ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ.”
  • ಒಎಂಆರ್‌ನಲ್ಲಿ ಅವಕಾಶ: “ಒಎಂಆರ್ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ತುಂಬಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದು ವೇಳೆ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಕ್ರಮ ಸಂಖ್ಯೆ ಒಂದೇ ಇರಬೇಕೆಂದು ನಿಯಮವಿದ್ದಿದ್ದರೆ, ಒಎಂಆರ್‌ನಲ್ಲಿ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಬರೆಯಲು ಪ್ರತ್ಯೇಕವಾಗಿ ಸೂಚಿಸುವ ಅಗತ್ಯವೇ ಇರಲಿಲ್ಲ.”
  • ಸ್ಪಷ್ಟನೆ ಪ್ರತಿ

ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ:

ಸಾಮಾಜಿಕ ಮಾಧ್ಯಮಗಳ ಮೂಲಕ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡಿ ಅಭ್ಯರ್ಥಿಗಳನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ಇಂತಹ ವದಂತಿಗಳನ್ನು ಮತ್ತು ಅನಗತ್ಯ ಸುಳ್ಳು ಸುದ್ದಿಗಳನ್ನು ಹರಡದಂತೆ ಹಾಗೂ ನಂಬದಂತೆ ಕೆಇಎ (KEA) ಸ್ಪಷ್ಟವಾಗಿ ಕೋರಿದೆ.