ಅರಸೀಕೆರೆ (kannadapost.com): ಕಾಯಕ ಶಿವಯೋಗಿ ಶ್ರೀ ಗುರುಸಿದ್ಧರಾಮೇಶ್ವರರ 854ನೇ ಜಯಂತ್ಯುತ್ಸವ ಹಾಸನ ನಗರದಲ್ಲಿ ಜ.14 ಮತ್ತು 15ರಂದು ಅದ್ಧೂರಿಯಾಗಿ ನಡೆಯಲಿದ್ದು, ಸಮಾರಂಭದ ಯಶಸ್ಸಿಗೆ ಸಮಾಜ ಬಾಂಧವರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮನವಿ ಮಾಡಿದರು.
ನಗರದ ಶ್ರೀ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡಿನ ಉದ್ದಗಲಕ್ಕೂ ಕಳೆದ ಐದೂವರೆ ದಶಕಗಳಿಂದ ಶ್ರೀ ಗುರುಸಿದ್ಧರಾಮೇಶ್ವರರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜಯಂತ್ಯೋತ್ಸವ ಆಯೋಜಿಸಲು ಹಾಸನ ನಗರಕ್ಕೆ ಕೇಂದ್ರ ಸಮಿತಿ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಈ ಐತಿಹಾಸಿಕ ಸಮಾರಂಭ ಜರುಗಲಿದೆ. ಕಾರ್ಯಕ್ರಮಕ್ಕೆ ವಿವಿಧ ಮಠಗಳ ಹರಗುರು ಚರಮೂರ್ತಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ತಾಲೂಕು ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಗೊಂದಲಕ್ಕೆ ಆಸ್ಪದ ಬೇಡ:
ಸಮಿತಿಗಳ ರಚನೆ ಹಾಗೂ ಜವಾಬ್ದಾರಿ ಹಂಚಿಕೆ ವಿಷಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಕಾಯಕ ಯೋಗಿಯ ಜಯಂತಿಯ ಔಚಿತ್ಯ ಅರಿತು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಿದೆ.
ಸ್ವಯಂ ಸೇವೆಯಲ್ಲಿ ಪಾಲ್ಗೊಳ್ಳುವ ಆಸಕ್ತರಿಗೆ ಮುಕ್ತ ಅವಕಾಶವಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅವಕಾಶಗಳನ್ನು ಪಡೆಯಲು ಸಮುದಾಯದ ಒಗ್ಗಟ್ಟು ಅನಿವಾರ್ಯ ಎಂಬುದನ್ನು ಮರೆಯಬಾರದು.
ಯಾವುದೇ ಕಾರಣಕ್ಕೂ ಗೊಂದಲಕ್ಕೆ ಆಸ್ಪದ ನೀಡದೆ, ಈ ಜಾಗತಿಕ ಹಬ್ಬದ ಯಶಸ್ಸಿಗೆ ಸರ್ವ ಸಮುದಾಯದ ಸಹಕಾರ ನೀಡಬೇಕು. ಜಯಂತಿ ಸಿದ್ಧತೆ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಸಮಿತಿಯ ಗಮನಕ್ಕೆ ತರಬಹುದು ಎಂದು ಕೆ.ಎಸ್. ಲಿಂಗೇಶ್ ಹೇಳಿದರು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉಪಸಮಿತಿ ಮಾಜಿ ಅಧ್ಯಕ್ಷ ಜಾವಗಲ್ ರಾಜಶೇಖರ್ ಸೇರಿದಂತೆ ಹಲವರು ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷ ಕಾಟೀಕೆರೆ ಉಮೇಶ್, ಖಜಾಂಚಿ ಕುಬೇರಪ್ಪ, ನಿರ್ದೇಶಕ ಬೆಳಗುಂಬ ಚಂದು, ಗಂಗೂರು ಶಿವಕುಮಾರ್, ಮಾಜಿ ನಿರ್ದೇಶಕ ಮಲ್ಲೇನಹಳ್ಳಿ ಶಿವಶಂಕರ್ ಸ್ವಾಮಿ, ಜಯಂತ್ಯೋತ್ಸವ ಸಮಿತಿ ಖಜಾಂಚಿ ಈಶ್ವರಪ್ಪ, ಉಂಡಿಗನಾಳು ಬಸವರಾಜು, ಉಪಸಮಿತಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಕಾರ್ಯದರ್ಶಿ ಶಿವಕುಮಾರ್, ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಕಪನಿಗೌಡ, ಬೇಲೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ಮುಖಂಡ ಜಿವಿಟಿ ಬಸವರಾಜು, ಸಂಕೋಡನಹಳ್ಳಿ ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.












