ಹಾಸನ: ಅಪ್ಪ ಮೊಬೈಲ್ ಕೊಡಿಸಲಿಲ್ಲ ಎಂದು ಹದಿಮೂರು ವರ್ಷದ ಬಾಲಕ ಇದೆಂಥ ನಿರ್ಧಾರ ಮಾಡಿದ!

ಹಾಸನ: ತಂದೆ ಮೊಬೈಲ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದ 13 ವರ್ಷದ ಬಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ನಡೆದಿದೆ.

​ಪ್ರೀತಂ (13) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಬಾಲಕ.

ಮೃತ ಬಾಲಕ ಪ್ರೀತಂ

​ಘಟನೆಯ ಹಿನ್ನೆಲೆ

​ಮೃತ ಪ್ರೀತಂ ಚಿತ್ರದುರ್ಗ ಮೂಲದ ಶ್ರೀನಿವಾಸ್ ಹಾಗೂ ಗೌರಮ್ಮ ದಂಪತಿಯ ಪುತ್ರ. ಈ ದಂಪತಿ ಯಡಿಯೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಲೇಔಟ್‌ನಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದರು. ಇವರು ಲೇಔಟ್‌ನಲ್ಲೇ ನಿರ್ಮಿಸಲಾಗಿದ್ದ ಶೆಡ್‌ನೊಳಗೆ ವಾಸವಿದ್ದರು.

​ಬಾಲಕ ಪ್ರೀತಂ ಚಿತ್ರದುರ್ಗದಲ್ಲಿಯೇ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ರಜೆ ಇದ್ದ ಕಾರಣ ಕಳೆದ ಶನಿವಾರವಷ್ಟೇ ಆತ ಪೋಷಕರಿದ್ದ ಯಡಿಯೂರಿಗೆ ಬಂದಿದ್ದನು.

​ಮೊಬೈಲ್‌ಗಾಗಿ ಹಠ, ನೇಣಿಗೆ ಶರಣು

​ಯಡಿಯೂರಿಗೆ ಬಂದಿದ್ದ ಪ್ರೀತಂ, ತನಗೆ ಸ್ಮಾರ್ಟ್‌ಫೋನ್ (ಮೊಬೈಲ್) ಕೊಡಿಸುವಂತೆ ಪೋಷಕರನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದನು. ಆದರೆ, ಆತನ ತಂದೆ ಶ್ರೀನಿವಾಸ್ ಅವರು ಸದ್ಯಕ್ಕೆ ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು.

​ತಾನು ಕೇಳಿದರೂ ಮೊಬೈಲ್ ಕೊಡಿಸಲಿಲ್ಲವಲ್ಲ ಎಂದು ತೀವ್ರವಾಗಿ ಮನನೊಂದ ಪ್ರೀತಂ, ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಶೆಡ್‌ನೊಳಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

​ಸ್ಥಳಕ್ಕೆ ಪೊಲೀಸರ ಭೇಟಿ

​ಘಟನೆಯ ಮಾಹಿತಿ ತಿಳಿದ ಕೂಡಲೇ ಹಾಸನ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.