ಹಾಸನ: ನಗರದ ತೇರಾಪಂಥ್ ಭವನದಲ್ಲಿ ಸೆ.17 ರಂದು ರಕ್ತದಾನ ಅಮೃತ ಮಹೋತ್ಸವ2.0 ಹೆಸರಿನಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಲಿದೆ ಎಂದು ಅಖಿಲ ಭಾರತೀಯ ತೇರಾಪಂಥ್ ಯುವಕ್ ಪರಿಷದ್ ಪರವಾಗಿ ಜಯಂತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಮಹತ್ವದ ಕಾರ್ಯಕ್ರಮ ಪೂಜ್ಯ ಜೈನ ಶ್ವೇತಾಂಬರ್ ತೇರಾಪಂಥ್ ಸಮಾಜದ 11ನೇ ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ರೂಪುಗೊಂಡಿದೆ. ಈ ಶಿಬಿರ ಕೇವಲ ರಕ್ತದಾನವಲ್ಲ, ಜೀವದಾನ ಎಂದರು.
ಆರೋಗ್ಯ ಸೇವೆಯಲ್ಲೂ ಮುಂಚೂಣಿ ಸಮಾಜದ ಪ್ರತಿಯೊಬ್ಬನಿಗೂ ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆಚಾರ್ಯ ತುಳಸಿ ರೋಗ ನಿರ್ಣಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಈ ಕೇಂದ್ರಗಳ ಮೂಲಕ ಸಾವಿರಾರು ಜನರು ಅಗ್ಗದ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಜೊತೆಗೆ, ಸರ್ಕಾರ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಹಕಾರದೊಂದಿಗೆ ಹಲವು ಪರಿಣಾಮಕಾರಿ ಅಭಿಯಾನ ನಿರಂತರವಾಗಿ ನಡೆಯುತ್ತಿವೆ.
ಹಾಸನದಲ್ಲಿ ನಡೆಯಲಿರುವ ರಕ್ತದಾನ ಅಮೃತ ಮಹೋತ್ಸವ2.0 ರಲ್ಲಿ ಪ್ರತಿಯೊಬ್ಬ ಯುವಕರೂ ಭಾಗವಹಿಸಬೇಕು. ನಿಮ್ಮದೊಂದು ಹನಿ ರಕ್ತ, ಮತ್ತೊಬ್ಬರಿಗೆ ಜೀವದಾನ ಎಂದು ವಿಕಾಸ್ ಕೊತರಿ ಕರೆ ನೀಡಿದರು.
ಈ ವೇಳೆ ಪರಿಷದ್ ಅಧ್ಯಕ್ಷ ನಿತೇಶ್ ಸುರಾನಾ, ಕಾರ್ಯದರ್ಶಿ ಮನಿಶ್ ಟಾಟೇಡ್,ವಿಕಾಸ್ ಬನ್ಸಾಲಿ, ಹನ್ಮುಲ್ ಕೊಥಾರಿ, ವಿನಯ್ ಕೊಥಾರಿ ಇದ್ದರು.










