Hassan:​ಹಾಸನ: ಅಪಘಾತ ಸ್ಥಳದಲ್ಲಿಯೇ ಕಿತ್ತಾಡಿಕೊಂಡ ಪೊಲೀಸರು; ರಸ್ತೆ ಮಧ್ಯೆ ಹೈಡ್ರಾಮಾ, ಜಗಳ ಬಿಡಿಸಿದ ಸಾರ್ವಜನಿಕರು!

Hassan|ಹಾಸನ: ಅಪಘಾತವಾದಾಗ ಸ್ಥಳಕ್ಕೆ ಬಂದು ಸುಗಮ ಸಂಚಾರ ಕಲ್ಪಿಸಿ, ಗಾಯಾಳುಗಳಿಗೆ ನೆರವಾಗಬೇಕಾದ ಪೊಲೀಸರೇ ನಡುರಸ್ತೆಯಲ್ಲಿ ಜಗಳವಾಡಿಕೊಂಡಿರುವ ವಿಚಿತ್ರ ಘಟನೆ ಹಾಸನದಲ್ಲಿ ನಡೆದಿದೆ.

​ಹಾಸನ ತಾಲ್ಲೂಕಿನ ಕುಪ್ಪಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಟಾಟಾ ನೆಕ್ಸನ್ ಹಾಗೂ ಮಾರುತಿ ಬಲೆನೊ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಎರಡೂ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎರಡು ಬೇರೆ ಬೇರೆ ಠಾಣೆಯ ಪೊಲೀಸರು ಪರಸ್ಪರ ಕಿತ್ತಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ನಡುರಸ್ತೆಯಲ್ಲೇ ಪೊಲೀಸರ ವಾಗ್ವಾದ!

ಅಪಘಾತದ ಸ್ಥಳಕ್ಕೆ ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣೆ ಹಾಗೂ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದ್ದರು. ಈ ವೇಳೆ ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹರೀಶ್ ಹಾಗೂ ಹಾಸನ ಗ್ರಾಮಾಂತರ ಠಾಣೆಯ ಮುಖ್ಯಪೇದೆ ಯೋಗೇಶ್ ನಡುವೆ ಏಕಾಏಕಿ ಮಾತಿನ ಚಕಮಕಿ ಶುರುವಾಗಿದೆ.

​”ನಿನ್ನ ಬಗ್ಗೆ ರಿಪೋರ್ಟ್ ಹಾಕುತ್ತೇನೆ” ಎಂದು ಮುಖ್ಯಪೇದೆ ಯೋಗೇಶ್ ಎಚ್ಚರಿಕೆ ನೀಡಿದರೆ, ಇದಕ್ಕೆ ಪ್ರತ್ಯುತ್ತರ ನೀಡಿದ ಕಾನ್ಸ್‌ಟೇಬಲ್ ಹರೀಶ್, “ಏನ್ ರಿಪೋರ್ಟ್ ಹಾಕ್ತೀರಾ ಹಾಕಿ, ಏನೂ ಮಾಡಲು ಆಗುವುದಿಲ್ಲ” ಎಂದು ರಸ್ತೆಯಲ್ಲೇ ವಾಗ್ವಾದಕ್ಕೆ ಇಳಿದಿದ್ದಾರೆ.

ಪೊಲೀಸರ ಜಗಳ ಬಿಡಿಸಿದ ಸಾರ್ವಜನಿಕರು!

ಪೊಲೀಸರ ಈ ಹೈಡ್ರಾಮಾದಿಂದಾಗಿ ಅಪಘಾತಕ್ಕೀಡಾಗಿದ್ದ ಕಾರುಗಳು ಕೆಲಹೊತ್ತು ರಸ್ತೆ ಮಧ್ಯೆಯೇ ಉಳಿದು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಪೊಲೀಸರ ಜಗಳವನ್ನು ನೋಡುತ್ತಾ ನಿಂತಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರೇ ಮಧ್ಯಪ್ರವೇಶಿಸಿ, ಇಬ್ಬರು ಪೊಲೀಸರ ಜಗಳ ಬಿಡಿಸಿ ಸಮಾಧಾನಪಡಿಸಿದ್ದಾರೆ.