Tumkur: ತುಮಕೂರಿನಲ್ಲಿ ಭೀಕರ ದುರಂತ: ಪ್ರೇಯಸಿಗೆ ಚಾಕು ಇರಿದು, ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಪಾಗಲ್ ಪ್ರೇಮಿ ಸಜೀವ ದಹನ!

Tumkur|ತುಮಕೂರು: ಜಿಲ್ಲೆಯ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಅತ್ಯಂತ ಭೀಕರ ಹಾಗೂ ನಡುಕ ಹುಟ್ಟಿಸುವ ಘಟನೆಯೊಂದು ಸಂಭವಿಸಿದೆ. ಪ್ರೀತಿ ನಿರಾಕರಿಸಿದ ಕೋಪದಲ್ಲಿ ಯುವತಿಯೊಬ್ಬಳನ್ನು ಬೆಂಗಳೂರಿನಿಂದ ಕಾರಿನಲ್ಲಿ ಅಪಹರಿಸಿಕೊಂಡು ಬಂದ ಪಾಗಲ್ ಪ್ರೇಮಿಯೊಬ್ಬ, ಆಕೆಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ತಾನೇ ಪೆಟ್ರೋಲ್ ಬಾಂಬ್ (ನಾಡ ಬಾಂಬ್) ಸಿಡಿಸಿಕೊಂಡು ಸಜೀವ ದಹನವಾಗಿದ್ದಾನೆ. ಅದೃಷ್ಟವಶಾತ್ ಯುವತಿ ಚಲಿಸುವ ಕಾರಿನಿಂದ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

​ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಳ ರಾಜನಗುಳಿ ನಿವಾಸಿ ನಾಗೇಂದ್ರ ತಿಮ್ಮಪ್ಪ ಗೌಡ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವತಿಯನ್ನು ಅಂಕೋಲಾ ತಾಲೂಕಿನ ಅಗಸೂರು ಸರಳೆಬೈಲ್ ನಿವಾಸಿ ರಮ್ಯಾ ಉಲ್ಲಾಸ್ ನಾಯಕ್ (23) ಎಂದು ಗುರುತಿಸಲಾಗಿದ್ದು, ಸದ್ಯ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಆರು ವರ್ಷಗಳ ಪ್ರೀತಿ ಮುನಿಸಿಗೆ ತಿರುಗಿದ್ದು ಹೇಗೆ?

​ಪೊಲೀಸ್ ಮೂಲಗಳ ಪ್ರಕಾರ, ರಮ್ಯಾ ಮತ್ತು ನಾಗೇಂದ್ರ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಮ್ಯಾ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲೇ ಇವರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಾಗೇಂದ್ರ ಯಾವುದೇ ಕೆಲಸ ಮಾಡದೆ ನಿರುದ್ಯೋಗಿಯಾಗುಳಿದಿದ್ದರಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಅಲ್ಲದೆ ನಾಗೇಂದ್ರ ತನ್ನನ್ನು ಮದುವೆಯಾಗುವಂತೆ ರಮ್ಯಾಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಲಾರಂಭಿಸಿದ್ದ ಎನ್ನಲಾಗಿದೆ. ಈ ಕಾಟಕ್ಕೆ ರೋಸಿಹೋದ ರಮ್ಯಾ, ನಾಗೇಂದ್ರನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ಆತನಿಂದ ದೂರವಿದ್ದಳು.

​ರಮ್ಯಾ ಬೆಂಗಳೂರಿನ ಜಯನಗರದ 1ನೇ ಬ್ಲಾಕ್‌ನಲ್ಲಿ ಕೊಠಡಿಯೊಂದನ್ನು ಮಾಡಿಕೊಂಡು ವಾಸವಿದ್ದಳು ಹಾಗೂ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ (OT) ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ರಮ್ಯಾ ತನ್ನನ್ನು ದೂರವಿಟ್ಟಿರುವುದನ್ನು ಸಹಿಸದ ನಾಗೇಂದ್ರ, ಶುಕ್ರವಾರ ತಡರಾತ್ರಿ ಅಂಕೋಲಾದಿಂದ ಬೆಂಗಳೂರಿಗೆ ಬಂದಿಳಿದಿದ್ದನು.

ಬೆಳ್ಳಂಬೆಳಗ್ಗೆ ರೂಮ್ ಬಳಿ ಬಂದು ಕಿಡ್ನ್ಯಾಪ್

​ಶನಿವಾರ ಮುಂಜಾನೆ ಸುಮಾರು 7 ಗಂಟೆಗೆ ಜಯನಗರದಲ್ಲಿರುವ ರಮ್ಯಾಳ ರೂಮ್ ಮುಂದೆ ಪ್ರತ್ಯಕ್ಷನಾದ ನಾಗೇಂದ್ರ, ಏಕಾಏಕಿ ಆಕೆಯ ಕೊಠಡಿಯೊಳಗೆ ನುಗ್ಗಿ ತೀವ್ರ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ರಮ್ಯಾಳ ಗೆಳತಿಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲ್ಲುವುದಾಗಿ ರಮ್ಯಾಳನ್ನು ಹೆದರಿಸಿ, ಬೆಂಗಳೂರಿನಲ್ಲೇ ಆನ್‌ಲೈನ್ ಮೂಲಕ ಯೆಲ್ಲೋ ಬೋರ್ಡ್ (ಉಬರ್ ಕ್ಯಾಬ್) ಕಾರೊಂದನ್ನು ಬುಕ್ ಮಾಡಿದ್ದಾನೆ. ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಂಕೋಲಾ ಕಡೆಗೆ ಪ್ರಯಾಣ ಬೆಳೆಸಿದ್ದಾನೆ.

​ಆರು ವರ್ಷಗಳ ಸುದೀರ್ಘ ಪ್ರೀತಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಈ ಭೀಕರ ಕೃತ್ಯ ನಡೆದಿದೆ. ಆರೋಪಿ ನಾಗೇಂದ್ರ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದರಿಂದ ಇಬ್ಬರ ನಡುವೆ ಜಗಳ ಉಂಟಾಗಿತ್ತು ಎಂದು ತಿಳಿದುಬಂದಿದೆ.

ಚಲಿಸುವ ಕಾರಿನಲ್ಲೇ ಚಾಕು ಇರಿತ – ಸಾಹಸದಿಂದ ಬದುಕಿದ ಯುವತಿ

​ಬೆಂಗಳೂರಿನಿಂದ ಹೊರಟಾಗಿನಿಂದಲೂ ರಸ್ತೆ ಉದ್ದಕ್ಕೂ ನಾಗೇಂದ್ರ ರಮ್ಯಾ ಜೊತೆ ಜಗಳವಾಡುತ್ತಲೇ ಬಂದಿದ್ದ. “ನಿನ್ನನ್ನು ಸಾಯಿಸಿ ನಾನೂ ಸಾಯುತ್ತೇನೆ” ಎಂದು ಕಾರಿನಲ್ಲೇ ತಾನು ತಂದಿದ್ದ ನಾಡ ಬಾಂಬ್ (ಪೆಟ್ರೋಲ್ ಬಾಂಬ್) ತೋರಿಸಿ ಹೆದರಿಸುತ್ತಿದ್ದ. ನಾಗೇಂದ್ರನ ಈ ಉಗ್ರ ರೂಪಕ್ಕೆ ಹೆದರಿದ ರಮ್ಯಾ ಕಾರಿನಲ್ಲಿ ಮೌನವಾಗಿ ಪ್ರಯಾಣ ಮುಂದುವರೆಸಿದ್ದಳು. ಆದರೆ ಕಾರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ತಲುಪುತ್ತಿದ್ದಂತೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ನಾಗೇಂದ್ರ ತಾನು ತಂದಿದ್ದ ಚಾಕುವಿನಿಂದ ರಮ್ಯಾಳ ತಲೆ ಹಾಗೂ ಕೈಗೆ ಮನಸೋಇಚ್ಛೆ ಇರಿದಿದ್ದಾನೆ.

​ನಾಗೇಂದ್ರ ತನ್ನನ್ನು ಕೊಲ್ಲುವುದು ನಿಶ್ಚಿತ ಎಂದು ಅರಿತ ರಮ್ಯಾ, ತಕ್ಷಣವೇ ಸಮಯಪ್ರಜ್ಞೆ ಮೆರೆದು ಚಲಿಸುವ ಕಾರಿನ ಡೋರ್ ಲಾಕ್ ತೆಗೆದು ರಸ್ತೆಗೆ ಜಿಗಿದಿದ್ದಾಳೆ. ಯುವತಿ ರಸ್ತೆಗೆ ಜಿಗಿಯುತ್ತಿದ್ದಂತೆ ಗಾಬರಿಗೊಂಡ ಕ್ಯಾಬ್ ಚಾಲಕ ತಕ್ಷಣವೇ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ವಾಹನದಿಂದ ಕೆಳಗಿಳಿದಿದ್ದಾನೆ.

ಕಾರಿನೊಳಗೆ ಪೆಟ್ರೋಲ್ ಬಾಂಬ್ ಬ್ಲಾಸ್ಟ್ – ಸಜೀವ ದಹನ

​ಚಾಲಕ ಕೆಳಗಿಳಿಯುತ್ತಿದ್ದಂತೆಯೇ ಕಾರಿನ ಒಳಗಡೆಯೇ ಇದ್ದ ನಾಗೇಂದ್ರ ತಕ್ಷಣ ಎಲ್ಲಾ ಡೋರ್‌ಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾನೆ. ತಾನು ಮೊದಲೇ ಅತ್ಯಂತ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ಕಾರಿನೊಳಗೆ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಇಡೀ ಕಾರು ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದಿದ್ದು, ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಎಸ್‌ಪಿ ಭೇಟಿ, ತನಿಖೆ ತೀವ್ರ

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ್ ಕೆ.ವಿ. ಅವರು ಕಳ್ಳಂಬೆಳ್ಳ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

​ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್‌ಪಿ ಅಶೋಕ್ ಕೆ.ವಿ., “ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರೇಮ ವೈಫಲ್ಯ ಹಾಗೂ ಕಿಡ್ನ್ಯಾಪ್ ಹಿನ್ನೆಲೆಯಲ್ಲಿ ಈ ಘಟನೆ ನಡೆದುದು ಕಂಡುಬಂದಿದೆ. ಮೃತ ನಾಗೇಂದ್ರ ಪೆಟ್ರೋಲ್ ಬಾಂಬ್ ಕ್ಯಾರಿ ಮಾಡುತ್ತಿದ್ದು, ಅದನ್ನು ಕಾರಿನೊಳಗೆ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಯಾಳು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.

​ಇತ್ತ ಭೀಕರ ಘಟನೆಯ ಬೆನ್ನಲ್ಲೇ ಅಂಕೋಲಾ ಪೊಲೀಸರು ಮೃತ ನಾಗೇಂದ್ರ ಗೌಡನ ಮನೆಗೆ ದೌಡಾಯಿಸಿದ್ದು, ಬಾಂಬ್ ಪತ್ತೆ ದಳದ (Bomb Disposal Squad) ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆತ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಎಲ್ಲಿಂದ ತಂದಿದ್ದ ಮತ್ತು ಹೇಗೆ ತಯಾರಿಸಿದ್ದ ಎಂಬ ಬಗ್ಗೆಯೂ ತನಿಖೆ ಆರಂಭವಾಗಿದೆ.