ಹಳೇಬೀಡು (kannadapost.com): ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರದ ಬಳಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ದೇವಸ್ಥಾನಕ್ಕೆ ಬರುವ ದೇಶ-ವಿದೇಶಗಳ ಪ್ರವಾಸಿಗರು ಹಾಗೂ ಸ್ಥಳೀಯರು ಪ್ರತಿದಿನ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರನ್ನು ನಾಯಿಗಳು ಹಿಂಬಾಲಿಸುವುದು, ಗುಂಪಾಗಿ ಓಡಾಡುವುದು ಹಾಗೂ ಬೊಗಳುವುದರಿಂದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಆತಂಕದಿಂದಲೇ ದೇವಾಲಯ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ಪ್ರವಾಸಿ ತಾಣದ ಪ್ರವೇಶ ದ್ವಾರದಲ್ಲೇ ಇಂತಹ ಅವ್ಯವಸ್ಥೆ ಕಂಡುಬರುತ್ತಿರುವುದು ಪ್ರವಾಸಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಅನಾಹುತವಾದರೆ ಅಧಿಕಾರಿಗಳೇ ಹೊಣೆ:
ಪ್ರವಾಸಿಗರ ಸುರಕ್ಷತೆ ಹಾಗೂ ಪ್ರವಾಸಿ ತಾಣದ ಘನತೆ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಬಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.
”ದೇವಾಲಯದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದು ಅಧಿಕಾರಿಗಳ ಜವಾಬ್ದಾರಿ. ಕೂಡಲೇ ನಾಯಿ ಹಾವಳಿಗೆ ಶಾಶ್ವತ ಕಡಿವಾಣ ಹಾಕಬೇಕು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎದುರಿಸಬಹುದಾದ ಅನಾಹುತಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ,” ಎಂದು ಅವರು ಗಟ್ಟಿಯಾಗಿ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ ಏನು?
ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿ ಎಸ್.ಸಿ. ವಿರೂಪಾಕ್ಷ, “ನಾಯಿಗಳನ್ನು ಸೆರೆಹಿಡಿಯಲು ಕೆಲವು ಕಾನೂನಾತ್ಮಕ ಸಮಸ್ಯೆಗಳಿವೆ. ಅಲ್ಲದೆ, ಪ್ರಾಣಿ ಪ್ರಿಯರು (Animal lovers) ಸಹ ನಾಯಿ ಸೆರೆಹಿಡಿಯಲು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಹೀಗಾಗಿ ಈ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಮಾತುಕಥೆ ನಡೆಸುತ್ತಿದ್ದೇವೆ,” ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.












