ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜು ಹಾಗೂ ಲಕ್ಷ್ಮಣ್ ಅವರುಗಳಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ಮನೆ ಊಟದ ಸೌಲಭ್ಯಕ್ಕೆ ಹೈಕೋರ್ಟ್ ತಡೆ ನೀಡಿದೆ.
ಈ ಮೂವರು ನ್ಯಾಯಾಂಗ ಬಂಧನದಲ್ಲಿದ್ದು, ಟ್ರಯಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿ ಜೈಲಿನಲ್ಲೇ ವಾರಕ್ಕೊಮ್ಮೆ ಮನೆ ಊಟ ಪಡೆಯುವ ಅನುಮತಿ ಪಡೆದಿದ್ದರು. ಪೊಲೀಸರ ಮೇಲ್ಮನವಿಯ ಬಳಿಕ ಪ್ರತಿದಿನದ ಬದಲು ವಾರಕ್ಕೆ ಒಮ್ಮೆ ಮನೆ ಊಟಕ್ಕೆ ಅವಕಾಶ ನೀಡಲಾಗಿತ್ತು.
ಆದರೆ 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ಜೈಲಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಸರ್ಕಾರಿ ವಕೀಲರು, ಯಾವುದೇ ಆರೋಪಿಗೆ ವಿಶೇಷ ಸವಲತ್ತು ನೀಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಸೂಚಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಮನೆ ಊಟಕ್ಕೆ ಅವಕಾಶ ನೀಡಿದರೆ ಇತರೆ ಕೈದಿಗಳೂ ಅದೇ ಬೇಡಿಕೆ ಇಡುತ್ತಾರೆ, ಇದರಿಂದ ಜೈಲಿನ ಶಿಸ್ತು ಸಡಿಲವಾಗುತ್ತದೆ ಎಂಬ ವಾದ ಮಂಡಿಸಲಾಯಿತು.
ಇದಲ್ಲದೆ, ಜೈಲಿನಲ್ಲಿ ಈಗಾಗಲೇ ಎಫ್ಎಸ್ಎಸ್ಎಐ ಮಾರ್ಗಸೂಚಿಯಂತೆ ಗುಣಮಟ್ಟದ, ಸ್ವಚ್ಛ ಹಾಗೂ ಆರೋಗ್ಯಕರ ಆಹಾರವನ್ನು ಎಲ್ಲ ಕೈದಿಗಳಿಗೂ ಒದಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದ ಊಟ ನೀಡುವ ಅಗತ್ಯವೇನು ಎಂದು ಸರ್ಕಾರಿ ವಕೀಲರು ಪ್ರಶ್ನಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿತು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಸುಪ್ರೀಂಕೋರ್ಟ್ ಸೂಚನೆಯಂತೆ ಯಾರಿಗೂ ವಿಶೇಷ ಸವಲತ್ತು ನೀಡುವಂತಿಲ್ಲ ಎಂದಿದೆ.
ಜೈಲು ಕೈಪಿಡಿಯ ಪ್ರಕಾರ ಮನೆ ಊಟವನ್ನು ಅತ್ಯಂತ ವಿಶೇಷ ಸಂದರ್ಭಗಳಲ್ಲಿ ಮಾತ್ರ, ಅದೂ ವೈದ್ಯಕೀಯ ಕಾರಣಕ್ಕೆ ಐಜಿಪಿಯ ಅನುಮತಿಯೊಂದಿಗೆ ನೀಡಬಹುದೆಂದು ನ್ಯಾಯಾಲಯ ಉಲ್ಲೇಖಿಸಿದೆ.
ಈ ಆದೇಶದೊಂದಿಗೆ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರಿಗೆ ದೊರಕುತ್ತಿದ್ದ ಮನೆ ಊಟದ ಸೌಲಭ್ಯ ಸಂಪೂರ್ಣವಾಗಿ ರದ್ದಾಗಿದ್ದು, ಇನ್ನುಮುಂದೆ ಜೈಲೂಟವೇ ಅವರಿಗಿರುವ ಏಕೈಕ ಆಯ್ಕೆಯಾಗಿದೆ.










