ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬೆನ್ನಲ್ಲೇ ಗಿಲ್ಲಿ ನಟ ಹಾಗೂ ನಟಿ ಕಾವ್ಯಾ ಶೈವ ಅವರನ್ನು ಅಭಿಮಾನಿಗಳೇ ‘ಮದುವೆ’ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾಲಿವುಡ್ ಸ್ಟೂಡಿಯೋ ಎದುರು ನಡೆದ ಈ ಘಟನೆಯ ಬಳಿಕ ಅಭಿಮಾನಿಗಳ ವರ್ತನೆ ಬಗ್ಗೆ ಪರ–ವಿರೋಧ ಚರ್ಚೆಗಳು ತೀವ್ರಗೊಂಡಿವೆ.
ಕಟೌಟ್‌ಗಳಿಗೆ ಮದುವೆ, ಹನಿಮೂನ್ ಮಾತು
ಬಿಗ್ ಬಾಸ್ ಮನೆ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟೂಡಿಯೋ ಮುಂದೆ ಗಿಲ್ಲಿ ನಟ–ಕಾವ್ಯಾ ಶೈವ ಜೋಡಿ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ, ವಾದ್ಯಮೇಳದೊಂದಿಗೆ ಅಭಿಮಾನಿಗಳು ಮದುವೆಯ ನಾಟಕವಾಡಿದ್ದಾರೆ. ಇನ್ನೇನು ಹನಿಮೂನ್ ಕಳಿಸೋದಷ್ಟೇ ಬಾಕಿ ಎಂದು ಅಭಿಮಾನಿಗಳು ಹೇಳಿಕೊಂಡಿರುವುದು ಟೀಕೆಗೆ ಕಾರಣವಾಗಿದೆ.
ಬಿಗ್ ಬಾಸ್‌ನಲ್ಲೇ ಲವ್ ಪ್ರಪೋಸ್
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಲವು ಬಾರಿ ಕಾವ್ಯಾಗೆ ಲವ್ ಹಾಗೂ ಮದುವೆ ಪ್ರಪೋಸ್ ಮಾಡಿದ್ದರೂ, ಕಾವ್ಯಾ ಅದನ್ನು ತಮಾಷೆಯಾಗಿ ತೆಗೆದುಕೊಂಡು ಸ್ಪಷ್ಟ ನಿರಾಕರಣೆ ನೀಡಿದ್ದರು. ಆದರೆ ಶೋ ಮುಗಿದ ಕೂಡಲೇ ಅಭಿಮಾನಿಗಳೇ ಈ ರೀತಿ ವರ್ತಿಸಿರುವುದು ಅತಿರೇಕವೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ
ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು, “ಇದು ಮನರಂಜನೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯ. ಕಾವ್ಯಾ ಒಬ್ಬ ಹೆಣ್ಣು ಮಗು, ಅವಳ ಸ್ಥಾನದಲ್ಲಿ ನಿಂತು ನೋಡಿದರೆ ಈ ವರ್ತನೆ ಎಷ್ಟು ತಪ್ಪು ಎನ್ನುವುದು ಗೊತ್ತಾಗುತ್ತದೆ” ಎಂದು ಕಿಡಿಕಾರಿದ್ದಾರೆ. ಕೆಲವರು ಇದನ್ನು ‘ಹುಚ್ಚರ ಸಂತೆ’ ಎಂದು ಕರೆದಿದ್ದಾರೆ.
ನಿಜ ಮದುವೆಯಲ್ಲ
ಸ್ಪಷ್ಟಪಡಿಸಬೇಕಾದರೆ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರಿಗೆ ನಿಜವಾಗಿಯೂ ಮದುವೆಯಾಗಿಲ್ಲ. ಅಭಿಮಾನಿಗಳು ಕೇವಲ ಅವರ ಕಟೌಟ್‌ಗಳಿಗೆ ಮದುವೆ ಮಾಡಿಸಿ ಅದನ್ನೇ ನಿಜವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.
ಅಭಿಮಾನಕ್ಕೆ ಮಿತಿ ಅಗತ್ಯ
ನಟ ಅಥವಾ ಸ್ಪರ್ಧಿಯನ್ನು ಇಷ್ಟಪಡುವುದು ತಪ್ಪಲ್ಲ. ಆದರೆ ಅವರ ವೈಯಕ್ತಿಕ ಜೀವನದ ನಿರ್ಧಾರಗಳನ್ನು ಅಭಿಮಾನಿಗಳೇ ತೆಗೆದುಕೊಳ್ಳಲು ಮುಂದಾಗುವುದು ಅಕ್ಷಮ್ಯ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ನಟ–ಕಾವ್ಯಾ ನಡುವಿನ ಸಂಬಂಧ ಏನು ಎನ್ನುವುದು ಅವರಿಬ್ಬರ ವಿಷಯ. ಅಭಿಮಾನಿಗಳ ಅತಿರೇಕ ಸಮಾಜದ ಮನಸ್ಥಿತಿಯನ್ನೇ ಪ್ರಶ್ನಿಸುವಂತಾಗಿದೆ.










