ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಕೇವಲ 200 ರೂಪಾಯಿಗಾಗಿ ಮಂಗಳಮುಖಿಯೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಮಂಗಳಮುಖಿಯನ್ನು ದೇವಿ (27) ಎಂದು ಗುರುತಿಸಲಾಗಿದೆ. ಈ ಭೀಕರ ಹತ್ಯೆ ನಡೆಸಿದ ಆರೋಪಿ, ರಾಮಮೂರ್ತಿನಗರದ ನಿವಾಸಿ ಗೌತಮ್ (28) ಎಂಬಾತನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಶನಿವಾರ ಮುಂಜಾನೆ 2:30 ರಿಂದ 3:00 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿ ಗೌತಮ್ ದ್ವಿಚಕ್ರ ವಾಹನದಲ್ಲಿ ಬಂದು ದೇವಿಯನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ ಆಕೆಯ ಬಳಿ 200 ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಆದರೆ, ದೇವಿ ಹಣ ಕೊಡಲು ನಿರಾಕರಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಗೌತಮ್, ತನ್ನ ಬಳಿಯಿದ್ದ ಚಾಕುವಿನಿಂದ ದೇವಿಯ ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಮನಬಂದಂತೆ ಇರಿದಿದ್ದಾನೆ.
ಪರ್ಸ್, ಮೊಬೈಲ್ ದೋಚಿ ಪರಾರಿ
ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ದೇವಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಳಿಕ ಆರೋಪಿಯು ಆಕೆಯ ಬಳಿಯಿದ್ದ ಪರ್ಸ್ ಮತ್ತು ಮೊಬೈಲ್ ಅನ್ನು ದೋಚಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದನು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಕೃತ್ಯ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಗೌತಮ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. “ತಾನು ಮದ್ಯದ ಅಮಲಿನಲ್ಲಿದ್ದೆ ಹಾಗೂ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಹೋಗಿದ್ದೆ” ಎಂದು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಮಾಹಿತಿ ನೀಡಿದ್ದಾರೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಈ ಹಿಂದೆಯೂ ನಗರದಲ್ಲಿ ಇಂತಹ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.











