ಬೆಳಗಾವಿ ಜೈಲು ಹಗರಣ: ವೈರಲ್ ವಿಡಿಯೋ ಕಾಲ್ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಮಾಜಿ ಕೈದಿಯ ಸ್ಫೋಟಕ ಲಿಖಿತ ಹೇಳಿಕೆ!

ಬೆಳಗಾವಿ/ಬೆಂಗಳೂರು: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಬೆಳಗಾವಿ ಕೇಂದ್ರ ಕಾರಾಗೃಹದ (ಹಿಂಡಲಗಾ ಜೈಲು) ‘ಅಶ್ಲೀಲ ವಿಡಿಯೋ ಕಾಲ್’ ಪ್ರಕರಣ ಇದೀಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ.

ಕೆ.ಎಸ್.ಐ.ಎಸ್.ಎಫ್ (KSISF) ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮಾಜಿ ಕೈದಿಯೊಬ್ಬನ ನಡುವಿನ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಈ ಪ್ರಕರಣ ಕೇವಲ ವಿಡಿಯೋಗೆ ಮಾತ್ರ ಸೀಮಿತವಾಗಿಲ್ಲ; ಬದಲಿಗೆ ಕಾರಾಗೃಹದೊಳಗಿನ ಬೃಹತ್ ಭ್ರಷ್ಟಾಚಾರ, ವೇಶ್ಯಾವಾಟಿಕೆ ಮತ್ತು ಸುಲಿಗೆಯ ಜಾಲವನ್ನು ಒಳಗೊಂಡಿದೆ ಎನ್ನುವ ಸುರುಳಿ ಬಿಚ್ಚಿಕೊಳ್ಳುತ್ತಿದೆ.

ಅಶ್ಲೀಲ ವಿಡಿಯೋ ವೈರಲ್ ಆದ ಕೂಡಲೇ ಇನ್ಸ್‌ಪೆಕ್ಟರ್ ಜಯಶ್ರೀ ಆರ್. ಅವರು ಬೆಂಗಳೂರಿನ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಕೈದಿ ಸಾಯಿಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ಜೊತೆಗೆ, ಜೈಲಿನ ಭ್ರಷ್ಟಾಚಾರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದ ಪೋಸ್ಟ್‌ಗಳ ವಿರುದ್ಧ ಬೆಳಗಾವಿ ಸಿಇಎನ್ (CEN) ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿದೆ. ಪ್ರಸ್ತುತ ಬೆಂಗಳೂರು ಮೆಟ್ರೋ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸದರಿ ಮಹಿಳಾ ಅಧಿಕಾರಿ ದೂರು ನೀಡಿದ ಬೆನ್ನಲ್ಲೇ ರಜೆ ಮೇಲೆ ತೆರಳಿದ್ದಾರೆ.

​ಆದರೆ, ಮಾಧ್ಯಮಗಳಲ್ಲಿ ಈ ವಿಡಿಯೋ ಹೈಡ್ರಾಮಾ ಶುರುವಾಗುವ ಮುನ್ನವೇ, ಮಾಜಿ ಕೈದಿ ಸಾಯಿಕುಮಾರ್ ಅಲಿಯಾಸ್ ನಾಗಲಿಂಗಯ್ಯ ತನಗೆ ನೀಡಲಾಗಿದ್ದ ಇಲಾಖಾ ವಿಚಾರಣಾ ನೋಟಿಸ್‌ಗೆ ಸುದೀರ್ಘ ಲಿಖಿತ ಉತ್ತರವನ್ನು ದಾಖಲೆಗಳ ಸಮೇತ ರವಾನಿಸಿದ್ದು, ಆ ಸ್ಫೋಟಕ ಪತ್ರಗಳ ಪ್ರತಿಗಳು ಇದೀಗ ಇಲಾಖೆಯ ನೈಜ ಬಣ್ಣವನ್ನು ಬಯಲು ಮಾಡಿವೆ.

ಏನಿದು ನೋಟಿಸ್? ಲಿಖಿತ ಹೇಳಿಕೆಯಲ್ಲಿ ಏನಿದೆ?

ಸಾಯಿಕುಮಾರ್ ಈ ಹಿಂದೆ ಜೈಲಿನ ಭ್ರಷ್ಟಾಚಾರದ ಬಗ್ಗೆ ನೀಡಿದ್ದ ದೂರಿನ ಆಧಾರದ ಮೇಲೆ, ಧಾರವಾಡದ 3ನೇ ಪಡೆ ಕೆ.ಎಸ್.ಐ.ಎಸ್.ಎಫ್ ಡೆಪ್ಯುಟಿ ಕಮಾಂಡೆಂಟ್ ಕಚೇರಿಯಿಂದ 27/07/2026 ರಂದು ಸಾಯಿಕುಮಾರ್‌ಗೆ ವಿಚಾರಣಾ ನೋಟಿಸ್  ನೀಡಲಾಗಿತ್ತು. ಆಗಸ್ಟ್ 3, 2026ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಾಯಿಕುಮಾರ್ 01/08/2026 ರಂದು ತಮ್ಮ 6 ಪುಟಗಳ ಲಿಖಿತ ಹೇಳಿಕೆಯನ್ನು ಸ್ಪೀಡ್ ಪೋಸ್ಟ್ ಮೂಲಕ ವಿಚಾರಣಾಧಿಕಾರಿಗಳಿಗೆ ರವಾನಿಸಿದ್ದಾರೆ. ಇದೇ ಪತ್ರದಲ್ಲಿ ಇಡೀ ಹಗರಣದ ಕರಾಳ ಮುಖ ಅನಾವರಣಗೊಂಡಿದೆ.

ಮಾಜಿ ಕೈದಿಯ ಪತ್ರದಲ್ಲಿರುವ ಗಂಭೀರ ಆರೋಪಗಳು:

  • ಅಶ್ಲೀಲ ವಿಡಿಯೋ ಕಾಲ್ ರೆಕಾರ್ಡ್ ಮಾಡಿದ್ದು ಯಾಕೆ?:  ಇನ್ಸ್‌ಪೆಕ್ಟರ್ ಜಯಶ್ರೀ ಅವರೇ ತನಗೆ ಅಕ್ರಮವಾಗಿ ಮೊಬೈಲ್ ತಂದುಕೊಟ್ಟಿದ್ದರು. ಕರ್ತವ್ಯದಲ್ಲಿದ್ದಾಗಲೇ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ, ಸಮವಸ್ತ್ರ ತೆಗೆದು ಅಶ್ಲೀಲವಾಗಿ ವರ್ತಿಸುತ್ತಿದ್ದರು. ವೇಶ್ಯಾವಾಟಿಕೆ ಬಗ್ಗೆ ಫೋನ್‌ನಲ್ಲಿ ನಿರಂತರವಾಗಿ ಪೀಡಿಸುತ್ತಿದ್ದ ಕಾರಣಕ್ಕೆ ಬೇಸತ್ತು ಅವರ ವರ್ತನೆಯನ್ನು ತಾನೇ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿರುವುದಾಗಿ ಸಾಯಿಕುಮಾರ್ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾನೆ.
  • ಜೈಲಿನೊಳಗೆ ಪಂಚತಾರಾ ಸೌಲಭ್ಯ:  ಕಾರಾಗೃಹದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಜೈಲು ಅಧಿಕಾರಿಗಳು ಶಾಮೀಲಾಗಿ ಮೊಬೈಲ್, ಸಿಮ್ ಕಾರ್ಡ್, ಬೀಡಿ, ಸಿಗರೇಟ್ ಹಾಗೂ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ಹೊರಗಿನಿಂದ ಮೀನು, ಮಟನ್, ಚಿಕನ್ ತರಬಾರದೆಂಬ ನಿಯಮವಿದ್ದರೂ ತನಗೆ ರಾಜಾರೋಷವಾಗಿ ತಂದುಕೊಡಲಾಗುತ್ತಿತ್ತು. ಅಲ್ಲದೆ, ಜೈಲಿನೊಳಗೆ ಅಕ್ರಮ ವೇಶ್ಯಾವಾಟಿಕೆ ಕೂಡ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ.
  • ಬ್ಲಾಕ್‌ಮೇಲ್ ಮತ್ತು ಫೋನ್ ಪೇ ಸುಲಿಗೆ: ಇನ್ಸ್‌ಪೆಕ್ಟರ್ ಜಯಶ್ರೀ ಹಾಗೂ ಅವರ ಸ್ನೇಹಿತೆ ಶಶಿಕಲಾ ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆ. 2024ರ ಏಪ್ರಿಲ್, ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಫೋನ್ ಪೇ ಮೂಲಕ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 30 ಸಾವಿರಕ್ಕೂ ಹೆಚ್ಚು ಹಣವನ್ನು (ರೂ.5,000, ರೂ.15,000 ಹಾಗೂ ರೂ.10,000) ತನ್ನ ಹಾಗೂ ತನ್ನ ತಾಯಿಯ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಪುರಾವೆಯಾಗಿ ಯು.ಟಿ.ಆರ್ (UTR) ಸಂಖ್ಯೆಗಳನ್ನು ಪತ್ರದಲ್ಲಿ ಒದಗಿಸಲಾಗಿದೆ.
  • ನಕಲಿ ಸಹಿ, ವಾಹನ ಕಬಳಿಕೆ ಹಾಗೂ ಎನ್‌ಕೌಂಟರ್ ಬೆದರಿಕೆ:  ತಾನು ಜೈಲಿನಲ್ಲಿದ್ದಾಗ ತನ್ನ ಹೆಸರಿನಲ್ಲಿದ್ದ ಟಿ.ವಿ.ಎಸ್ ಜುಪಿಟರ್ ವಾಹನಕ್ಕೆ ನಕಲಿ ಸಹಿ ಮಾಡಿ ಶಶಿಕಲಾ ಹಾಗೂ ಜಯಶ್ರೀ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ, ತನ್ನ ವಿರುದ್ಧ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ, ಎನ್‌ಕೌಂಟರ್ ಮಾಡಲು ಸಂಚು ರೂಪಿಸಿದ್ದರು. ಈ ಬಗ್ಗೆ ಇನ್ಸ್‌ಪೆಕ್ಟರ್ ಜಯಶ್ರೀ ಹಾಗೂ ಮಂಜು ಎಂಬುವವರು ಮಾತನಾಡಿಕೊಂಡಿರುವ ಆಡಿಯೋ ರೆಕಾರ್ಡ್ ತನ್ನ ಬಳಿ ಇದೆ ಎಂದು ಸಾಯಿಕುಮಾರ್ ಸ್ಫೋಟಿಸಿದ್ದಾನೆ.

“ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ”

“ಅಪರಾಧಿಗಳ ಹಾಗೂ ಕೈದಿಗಳ ಮನಪರಿವರ್ತನೆ ಮಾಡಬೇಕಾದ ಅಧಿಕಾರಿಗಳೇ ರೌಡಿಯೊಬ್ಬನ ಬಳಿ ಈ ರೀತಿ ಅಪ್ರಮಾಣಿಕವಾಗಿ, ಅಶ್ಲೀಲವಾಗಿ ವರ್ತಿಸುವುದು ಪೊಲೀಸ್ ಇಲಾಖೆಗೆ ಶೋಭೆ ತರುವುದಿಲ್ಲ. ಇದೊಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ” ಎಂದು ಪತ್ರದ ಕೊನೆಯಲ್ಲಿ ಸಾಯಿಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾನೆ.

ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕೇವಲ ಒಂದು ವಿಡಿಯೋ ಲೀಕ್ ಆಗುವ ಮೂಲಕ ಆರಂಭವಾದ ಈ ವಿವಾದ, ಇದೀಗ ಜೈಲು ಆಡಳಿತ ಹಾಗೂ ಭದ್ರತಾ ಪಡೆಯೊಳಗಿನ ಆಳವಾದ ಭ್ರಷ್ಟಾಚಾರವನ್ನು ರಾಜ್ಯದ ಜನರ ಮುಂದಿಟ್ಟಿದೆ. ಇಲಾಖಾ ತನಿಖೆ ಎದುರಿಸುತ್ತಿರುವ ಮಹಿಳಾ ಅಧಿಕಾರಿ ಪ್ರಸ್ತುತ ದೂರು ನೀಡಿ ರಕ್ಷಣೆ ಕೋರುತ್ತಿದ್ದರೆ, ಇತ್ತ ಮಾಜಿ ಕೈದಿ ಅಧಿಕೃತವಾಗಿ ದಾಖಲೆಗಳ ಸಮೇತ ಲಿಖಿತ ಹೇಳಿಕೆ ಸಲ್ಲಿಸುವ ಮೂಲಕ ಪ್ರಕರಣವನ್ನು ಕಾನೂನಾತ್ಮಕ ಹೋರಾಟದತ್ತ ಕೊಂಡೊಯ್ದಿದ್ದಾನೆ.